ಶಿರಾಡಿ ಘಾಟ್ ರಸ್ತೆ ಏಕಮುಖ ಸಂಚಾರಕ್ಕೆ ಶೀಘ್ರ ವ್ಯವಸ್ಥೆ: ಸಚಿವ ಸಿ.ಸಿ.ಪಾಟೀಲ್
ಬೆಂಗಳೂರು, ಜು. 19: ‘ತೀವ್ರವಾಗಿ ಮಳೆ ಬಿದ್ದ ಪರಿಣಾಮ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಶಿರಾಡಿ ಘಾಟ್‍ನಲ್ಲಿ ಭೂ ಕುಸಿತ ಉಂಟಾಗಿದೆ. ಹೀಗಾಗಿ ಶಿರಾಡಿ ಘಾಟ್ ರಸ್ತೆಯ ದೋಣಿಗಾಲ್ ಬಳಿ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ' ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಶಿರಾಡಿ ಘಾಟ್, ಚಾರ್ಮುಡಿ ಘಾಟ್ ಮತ್ತು ಆಗುಂಬೆ ಘಾಟ್ ರಸ್ತೆಗಳ ಸ್ಥಿತಿಗತಿಗಳ ಬಗ್ಗೆ ಆ ವ್ಯಾಪ್ತಿಯ ಜಿಲ್ಲಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಸಂಪಾಜೆ ಘಾಟ್ ರಸ್ತೆಯಲ್ಲಿ ನಾಳೆ(ಜು.20)ಯಿಂದ ಭಾರೀ ವಾಹನಗಳು ಸೇರಿದಂತೆ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ. ಅಲ್ಲದೆ, ದೋಣಿಗಾಲ್ ಬಳಿ ಎರಡೂವರೆ ಕಿ.ಮೀ ಏಕಮುಖ(ಒನ್‍ವೇ) ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು' ಎಂದು ಸ್ಪಷ್ಟಣೆ ನೀಡಿದರು.
‘ರಾಜಧಾನಿ ಬೆಂಗಳೂರಿನಿಂದ ದಕ್ಷಿಣ ಕನ್ನಡಕ್ಕೆ ಹೋಗುವ ವಾಹನಗಳು ಶಿರಾಡಿ ಘಾಟ್ ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಲಾಗುವುದು. ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ಬರುವ ವಾಹನಗಳು ದೋಣಿಗಾಲ್ ಹತ್ತಿರದ ಕಪ್ಪಳ್ಳಿ, ಕೆಸಗಾನಹಳ್ಳಿ ಮಾರ್ಗವಾಗಿ ಹಳೆಯ ರಸ್ತೆ ಇದ್ದು ಅದನ್ನು ಬಳಸಬೇಕು. ಈ ರಸ್ತೆಯನ್ನು ತಾತ್ಕಾಲಿಕವಾಗಿ ವಿಸ್ತರಿಸಿ ಪರ್ಯಾಯ ರಸ್ತೆಮಾರ್ಗಕ್ಕೆ ತೀರ್ಮಾನಿಸಲಾಗಿದೆ ಎಂದು ಸಿ.ಸಿ.ಪಾಟೀಲ್ ಹೇಳಿದರು.
‘ಶಿರಾಡಿ ಘಾಟ್‍ನಲ್ಲಿ ಏಕಮುಖ ಸಂಚಾರ ತಾತ್ಕಾಲಿಕವಾಗಿದ್ದು, ದೋಣಿಗಾಲ್ ಬಳಿ ರಸ್ತೆ ಸರಿಪಡಿಸಿದ ಬಳಿಕ ನಿಗದಿಯಂತೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಈ ಕಾಮಗಾರಿಯನ್ನು ಒಂದೂವರೆ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, ರಸ್ತೆಗಳ ಸ್ಥಿತಿಗತಿಗಳನ್ನು ಖುದ್ದು ಪರಿಶೀಲನೆ ನಡೆಸಿದ್ದಾರೆ' ಎಂದು ಅವರು ತಿಳಿಸಿದರು.
‘ಸಂಪಾಜೆ ಘಾಟ್ ರಸ್ತೆಯಲ್ಲಿ ನಾಳೆಯಿಂದ ಎಲ್ಲ ರೀತಿ ವಾಹನ ಸಂಚರಿಸಬಹುದು. ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆ ಬಾಗುತ್ತಿದ್ದು, ಕೇಂದ್ರ ತಂಡದ ಅಧಿಕಾರಿಗಳು ಅಲ್ಲಿಯೇ ಪರಿಶೀಲನೆ ನಡೆಸಿದ್ದು, ರಸ್ತೆ ಮತ್ತಷ್ಟು ಕುಸಿಯದಂತೆ ತಡೆಗೋಡೆ ನಿರ್ಮಿಸಲು ಕ್ರಮ ವಹಿಸಿದ್ದಾರೆ' ಎಂದು ಸಿ.ಸಿ.ಪಾಟೀಲ್ ಹೇಳಿದರು.
ಶಿರಾಡಿಘಾಟ್ ಸಮಸ್ಯೆ ಬಗೆಹರಿಸಿದ್ದೇವೆ: ‘ಶಿರಾಡಿಘಾಟ್ ರಸ್ತೆಯ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಿದ್ದೇವೆ. ಶಿರಾಡಿ ಘಾಟ್ ರಸ್ತೆಯಲ್ಲಿನ ಕಾಮಗಾರಿ 2023ರ ಮಾರ್ಚ್‍ಗೆ ಪೂರ್ಣಗೊಳ್ಳಲಿದ್ದು, ಶಾಶ್ವತ ಪರಿಹಾರ ದೊರೆಯಲಿದೆ. ಈ ಹಿಂದೆ ಇದ್ದ ಗುತ್ತಿಗೆದಾರರ ದಿವಾಳಿ ಆಗಿದ್ದ ಕಾರಣಕ್ಕೆ ಕಾಮಗಾರಿ ವಿಳಂಬವಾಗಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಈ ಸಂಬಂಧ ಅಗತ್ಯವಿದ್ದರೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುತ್ತೇನೆ' ಎಂದು ಅವರು ವಿವರಿಸಿದರು.
‘ಮಳೆ ಅಧಿಕ ಪ್ರಮಾಣದಲ್ಲಿ ಬಿದ್ದ ಪರಿಣಾಮ ಸಮಸ್ಯೆ ಆಗಿದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದೇವೆ. ಅಧಿಕಾರಿಗಳು ಘಾಟ್ ಕುಸಿತ ಆದ ಸ್ಥಳದಲ್ಲಿ ಮೊಕ್ಕಾಂ ಹೂಡಲು ಸೂಚಿಸಿದ್ದೇವೆ. ಗುಡ್ಡ ಪ್ರದೇಶ ಹಾಗೂ ಆ ಮಣ್ಣಿನಲ್ಲಿ ಗಟ್ಟಿ ಹಿಡಿತವಿಲ್ಲದ ಕಾರಣ ಸಹಜವಾಗಿ ಭೂಮಿ ಕುಸಿತ ಆಗುತ್ತದೆ' ಎಂದು ಅವರು ಸ್ಪಷ್ಟಣೆ ನೀಡಿದರು.
‘ಶಿರಾಡಿ ಘಾಟ್‍ನ ಒಟ್ಟು 39 ಕಿ.ಮೀ ಉದ್ದವಿದ್ದು, ಆ ಪೈಕಿ 20 ಕಿಮೀ ಭಾಗ ರಾಷ್ಟ್ರೀಯ ಹೆದ್ದಾರಿ ವಶದಲ್ಲಿದ್ದು ಸುಸ್ಥಿತಿಯಲ್ಲಿದೆ. ಇದೀಗ ದೋಣಿಗಾಲ್ ಕಪ್ಪಳ್ಳಿ ನಡುವೆ 3 ಕಿ.ಮೀ ರಸ್ತೆಯನ್ನು ಏಕಮುಖ ಸಂಚಾರವನ್ನು ಮಾಡಲು ತೀರ್ಮಾನಿಸಲಾಗಿದೆ. ಐದಾರು ದಿನಗಳಲ್ಲಿ ಶಿರಾಡಿ ಘಾಟ್‍ನ ಸಂಚಾರಕ್ಕೆ ತಾತ್ಕಾಲಿಕವಾಗಿ ಅನುವು ಮಾಡಿಕೊಡಲಾಗುವುದು' ಎಂದು ಹೇಳಿದರು.
‘ಆಗುಂಬೆ ಘಾಟ್‍ನಲ್ಲಿಯೂ ಒಂದು ಕಡೆ ದೊಡ್ಡ ಹಾಗೂ ಇತರೆ ಸಣ್ಣ ಪ್ರಮಾಣದ ಭೂ ಕುಸಿತವಾಗಿದ್ದು ಆ ರಸ್ತೆ ದುರಸ್ತಿಗೆ ಸುಮಾರು 700 ಕೋಟಿ ರೂ.ವೆಚ್ಚವಾಗಲಿದೆ. ಮಳೆ ನಿಂತ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು' ಎಂದ ಅವರು, ‘ಶಿರಾಡಿ ಘಾಟ್ ಸುರಂಗ ಮಾರ್ಗ ನಿರ್ಮಾಣ ಸಂಬಂಧ ಸಮಗ್ರ ಯೋಜನಾ ವರದಿ(ಡಿಪಿಆರ್) ಸಿದ್ಧವಾಗುತ್ತಿದೆ. ಹೊಸ ತಂತ್ರಜ್ಞಾನದ ಮೂಲಕ ರಸ್ತೆ ಮಾಡುವ ಬಗ್ಗೆಯೂ ಡಿಪಿಆರ್ ಸಿದ್ಧಪಡಿಸಲು ಸೂಚಿಸಿದ್ದೇವೆ ಎಂದು ವಿವರಿಸಿದರು.
200 ಕೋಟಿ ರೂ.ಬಿಡುಗಡೆ: ‘ಮಳೆ ಹಿನ್ನೆಲೆಯಲ್ಲಿ ಹದಗೆಟ್ಟ ರಸ್ತೆ ಮತ್ತು ಸೇತುವೆಗಳ ಪುನರ್ ನಿರ್ಮಾಣ ಕಾಮಗಾರಿಗೆ 200 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು' ಎಂದ ಅವರು, ‘2019ರಲ್ಲಿ ಮಳೆ ಹಾನಿಗೆ ಸಂಬಂಧಿಸಿದಂತೆ 610 ಕೋಟಿ ರೂ. ಬಿಡುಗಡೆಯಾಗಿತ್ತು. ಈಗಾಗಲೇ 617 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. 141 ಕಿ.ಮಿ ರಾಜ್ಯ ಹೆದ್ದಾರಿ 924 ಕಿ.ಮೀ ಜಿಲ್ಲಾ ಮುಖ್ಯ ರಸ್ತೆಗಳು ಹಾಳಾಗಿದ್ದವು. ಇದೆಲ್ಲವನ್ನೂ ಸರಿಪಡಿಸಲು ನಮಗೆ 740 ಕೋಟಿ ರೂ.ಗೂ ಹೆಚ್ಚು ಮೊತ್ತ ವೆಚ್ಚವಾಗಲಿದೆ' ಎಂದು ಪಾಟೀಲ್ ಮಾಹಿತಿ ನೀಡಿದರು.
‘ಮೇ ಮತ್ತು ಜುಲೈ ತಿಂಗಳಿನಲ್ಲಿ ಸರಾಸರಿ 350 ಎಂ.ಎಂ. ಮಳೆ ಬೀಳುತ್ತದೆ. ಆದರೆ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 100 ಎಂ.ಎಂ. ಮಳೆ ಹೆಚ್ಚಾಗಿದೆ. ಹಲವು ರಸ್ತೆ, ಸೇತುವೆಗಳ ಹಾಳಾಗಿವೆ. ಅಲ್ಲದೆ, ಮಳೆ ಎಡಬಿಡದೆ ಸುರಿಯುತ್ತಿರುವ ಪರಿಣಾಮ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕಷ್ಟವಾಗಿದೆ. ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು' ಎಂದರು. ಸುದ್ದಿಗೋಷ್ಠಿಯಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು.