PSI ನೇಮಕಾತಿ ಮರು ಪರೀಕ್ಷೆ ಆದೇಶ ಎತ್ತಿ ಹಿಡಿದ ಕೆಎಟಿ
ಬೆಂಗಳೂರು, ಜು.19: ಪಿಎಸ್ಸೈ ನೇಮಕಾತಿ ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿಯು(ಕೆಎಟಿ) ಮಂಗಳವಾರ ಎತ್ತಿ ಹಿಡಿದಿದೆ.
ಲಿಖಿತ ಪರೀಕ್ಷೆ ರದ್ದುಪಡಿಸಿ, ಮರು ಪರೀಕ್ಷೆ ನಡೆಸಲು ಸರಕಾರ ಹೊರಡಿಸಿರುವ ಆದೇಶ ರದ್ದು ಕೋರಿ ಬೆಂಗಳೂರಿನ ಎಲ್.ಎನ್.ಪವಿತ್ರಾ ಸೇರಿ 28 ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಂಗ ಸದಸ್ಯರಾದ ಟಿ.ನಾರಾಯಣಸ್ವಾಮಿ ಮತ್ತು ಜಿ.ಲತಾ ಕೃಷ್ಣರಾವ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ.
ಪಿಎಸ್ಸೈ ನೇಮಕಾತಿ ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಸರಕಾರ ಮರು ಪರೀಕ್ಷೆಗೆ ಮುಂದಾಗಿದೆ. ಆದರೆ, ರಾಜ್ಯ ಸರಕಾರದ ಈ ನಿರ್ಧಾರದಿಂದ ಯಾವುದೇ ಅಕ್ರಮ ಎಸಗದೆ ಕಳಂಕರಹಿತವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಳಂಕರಹಿತ ಮತ್ತು ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ ಹಿಂದಿನ ಅಧಿಸೂಚನೆ ಪ್ರಕಾರವೇ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿ, ನೇಮಕ ಆದೇಶ ನೀಡಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಪೀಠಕ್ಕೆ ಮನವಿ ಮಾಡಿದ್ದರು. ಆದರೆ, ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಈ ಮನವಿಯನ್ನು ಮಾನ್ಯ ಮಾಡಿಲ್ಲ. ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಅರ್ಜಿದಾರರ ಪರ ವಾದಿಸಿದ್ದ ಹಿರಿಯ ವಕೀಲ ಡಿ.ಆರ್.ರವಿಶಂಕರ್ ಅವರು, ಪಿಎಸ್ಸೈ ಪರೀಕ್ಷೆಯ ಒಂದು ಕೇಂದ್ರದಲ್ಲಿ ನಡೆದ ಅಕ್ರಮ ಸಂಬಂಧ ಎಫ್‍ಐಆರ್ ದಾಖಲಾಗಿದೆ. ಸಿಐಡಿ ತನಿಖೆ ನಡೆಸುತ್ತಿದ್ದು, ಮಧ್ಯಂತರ ವರದಿ ಆಧರಿಸಿ ರಾಜ್ಯ ಸರಕಾರ ಮರು ಪರೀಕ್ಷೆ ನಡೆಸುವುದಾಗಿ ಆದೇಶಿಸಿದೆ. ತನಿಖೆ ಪೂರ್ಣಗೊಳ್ಳದಿರುವಾಗ ಇಡೀ ನೇಮಕ ಪ್ರಕ್ರಿಯೆ ರದ್ದುಪಡಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು.
ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ 545 ಅಭ್ಯರ್ಥಿಗಳೂ ಸಿಐಡಿ ಪತ್ರ ಬರೆದು ಅವರಿಗೆ ಒಎಂಆರ್ ಪ್ರತಿ ಸಲ್ಲಿಸುವಂತೆ ಸೂಚಿಸಿದ್ದು, ಎಲ್ಲರೂ ಒಎಂಆರ್ ಪ್ರತಿ ಸಲ್ಲಿಸಿದ್ದಾರೆ. ಈಗ ಆ ಪ್ರತಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸದಿದ್ದರೆ ಕಳಂಕಿತರು ಮತ್ತು ಕಳಂಕರಹಿತರು ಯಾರು ಎಂಬುದು ತಿಳಿಯುವುದಿಲ್ಲ. ನೇಮಕ ವಿಭಾಗದ ಎಡಿಜಿಪಿ, ಸಿಐಡಿ ಪೊಲೀಸ್ ಮಹಾನಿರ್ದೇಶಕರು ಯಾವುದೇ ತನಿಖೆ ನಡೆಸಿ ವರದಿ ಸಲ್ಲಿಸಿಲ್ಲ. ಬದಲಿಗೆ, ಕಳಂಕಿತ ಮತ್ತು ಕಳಂಕರಹಿತರನ್ನು ಪ್ರತ್ಯೇಕಿಸಲಾಗುತ್ತಿದ್ದು, ಅಮಾಯಕ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಹೀಗಿದ್ದರೂ, ಲಿಖಿತ ಪರೀಕ್ಷೆಯನ್ನೇ ರದ್ದುಪಡಿಸಿ, ಮರುಪರೀಕ್ಷೆಗೆ ಆದೇಶಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದರು.
ಕಲಬುರಗಿಯ ಒಂದು ಪರೀಕ್ಷಾ ಕೇಂದ್ರದ ಸಂಬಂಧ ತನಿಖೆ ನಡೆಸಿ ಸಿಐಡಿ ಮಧ್ಯಂತರ ವರದಿ ಸಲ್ಲಿಸಿದೆ. ಇದನ್ನು ಆಧರಿಸಿ ಮರು ಪರೀಕ್ಷೆ ನಡೆಸಲು ಸರಕಾರ ಆದೇಶಿಸಿದೆ. ಪಿಎಸ್ಸೈ ಹುದ್ದೆಗೆ 1.2 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ದೈಹಿಕ ಪರೀಕ್ಷೆಯ ನಂತರ 54,104 ಮಂದಿ ಲಿಖಿತ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ಇದರಲ್ಲಿ ಶೇ. 1ರಷ್ಟು ಅಭ್ಯರ್ಥಿಗಳೂ ಆಯ್ಕೆಯಾಗಿಲ್ಲ. ಪ್ರತಿ ಪಂದ್ಯದಲ್ಲೂ ಸಚಿನ್ ತೆಂಡೂಲ್ಕರ್ ಶತಕ ಬಾರಿಸಲಾಗದು. ಅಭ್ಯರ್ಥಿಗಳು ಪ್ರತಿ ಪರೀಕ್ಷೆಯಲ್ಲೂ ಟಾಪರ್ ಆಗಿ ಹೊರಹೊಮ್ಮಲಾಗದು. ಹೀಗಾಗಿ, ಸರಕಾರದ ಮರು ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಪೀಠಕ್ಕೆ ಕೋರಿದ್ದರು.
ರಾಜ್ಯ ಸರಕಾರದ ಪರ ವಾದಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸುಬ್ರಹ್ಮಣ್ಯ ಅವರು, ಪಿಎಸ್ಸೈ ನೇಮಕಾತಿ ಅಕ್ರಮ ಹಗರಣ ವ್ಯಾಪಕವಾಗಿರುವುದರಿಂದ ಕಳಂಕರಹಿತ ಮತ್ತು ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಲಾಗದು. ಹಗರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪೌಲ್, ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಸೇರಿ ಹಲವರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೀಠಕ್ಕೆ ತಿಳಿಸಿದ್ದರು.