ನಾಡಹಬ್ಬ ದಸರಾ ಅದ್ದೂರಿ ಆಚರಣೆಗೆ ನಿರ್ಧಾರ: ಸಿಎಂ ಬೊಮ್ಮಾಯಿ
ಬೆಂಗಳೂರು, ಜು.19: ನಾಡಹಬ್ಬ ಮೈಸೂರು ದಸರಾವನ್ನು ಪ್ರಸಕ್ತ ಸಾಲಿನಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಬೇಕೆಂಬುದು ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳ ಅಭಿಲಾಷೆಯಾಗಿದೆ. ಅದರಂತೆ, ಸರಕಾರವು ಅದ್ಧೂರಿಯಾಗಿ ದಸರಾ ಆಚರಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ನಾಡಹಬ್ಬ ಮೈಸೂರು ದಸರಾ ಉತ್ಸವ-2022 ಆಚರಣೆ ಸಂಬಂಧ ಚರ್ಚಿಸಲು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಇದು ನಾಡಹಬ್ಬ. ರಾಜ್ಯದ ಮೂಲೆ ಮೂಲೆಯಿಂದ ಜನ ಬರಬೇಕು. ಕೊರೋನ ಬಳಿಕ ನಡೆಯುತ್ತಿರುವ ದಸರಾ ಇದಾಗಿದೆ. ಆದುದರಿಂದ, ‘ದಸರಾ ಬ್ರಾಂಡಿಂಗ್’ ಮಾಡಿ ಮುಂದಿನ ಎರಡು ತಿಂಗಳುಗಳ ಕಾಲ ದೇಶದ ಮಹಾನಗರಗಳಾದ ಮುಂಬೈ, ದಿಲ್ಲಿ, ಕಲ್ಕತ್ತಾ, ಚೆನ್ನೈ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಹಾಗೂ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿ, ಜನರನ್ನು ದಸರಾ ವೀಕ್ಷಣೆಗೆ ಆಹ್ವಾನಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ದಸರಾ ವೇಳೆ ಜಂಬೂ ಸವಾರಿ ಸೇರಿದಂತೆ ಈ ಹಿಂದೆ ಯಾವೆಲ್ಲ ಆಚರಣೆಗಳನ್ನು ಮಾಡಲಾಗುತ್ತಿತ್ತೋ, ಅವುಗಳನ್ನೆಲ್ಲ ಪುನಃ ಆಚರಿಸಲು ಸೂಚಿಸಲಾಗಿದೆ. ವಸ್ತು ಪ್ರದರ್ಶನವನ್ನು 15 ದಿನ ಮುಂಚಿತವಾಗಿ ಆರಂಭಿಸಲು ನಿರ್ಧರಿಸಲಾಗಿದೆ. ಈ ಬಾರಿ ಸ್ಥಳೀಯ ಕಲಾಕಾರರಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ಪ್ರತಿ ದಿನ ಒಬ್ಬ ರಾಷ್ಟ್ರಮಟ್ಟದ ಕಲಾಕಾರರನ್ನು ಮುಖ್ಯ ಆಕರ್ಷಣೆಯ ರೂಪದಲ್ಲಿ ಆಹ್ವಾನಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಹಾಗೂ ಚಾಮರಾಜನಗರದಲ್ಲಿಯೂ ವೈಭವಯುತ ದಸರಾ ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಬಜೆಟ್‍ನಲ್ಲಿ ಮೈಸೂರು ಹಾಗೂ ಹಂಪಿ ಟೂರಿಸಂ ಸರ್ಕಿಟ್ ಘೋಷಿಸಲಾಗಿತ್ತು. ಒಂದು ವಾರದಲ್ಲಿ ಮೈಸೂರು ಟೂರಿಸಂ ಸರ್ಕಿಟ್ ಘೋಷಣೆ ಮಾಡಲಾಗುವುದು. ಇದರಿಂದಾಗಿ, ಮೈಸೂರು, ಬೇಲೂರು, ಹಳೇಬೀಡು ಮುಂತಾದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಬಯಸುವವರು ಆನ್‍ಲೈನ್ ಮೂಲಕ ಒಂದೇ ಟಿಕೆಟ್ ಬುಕ್ ಮಾಡಿ ಪ್ರಯಾಣಿಸಬಹುದಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಸೆಪ್ಟಂಬರ್ 26ರಂದು ದಸರಾ(ನವರಾತ್ರಿ) ಆರಂಭವಾಗಲಿದೆ. ಅ.5ರಂದು ವಿಜಯ ದಶಮಿ, ನಂದಿ ಪೂಜೆ ಆಗಲಿದೆ. ಆ.7ರಂದು ವೀರಹೊಸಹಳ್ಳಿಯಿಂದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯ ಪಯಣ ಆರಂಭವಾಗಲಿದ್ದು, ಆ.10ರಂದು ಮೈಸೂರು ಅರಮನೆ ಪ್ರವೇಶಿಸಲಿದೆ. ಅ.7ರಂದು ಗಜಪಡೆಯು ಅರಮನೆಯಿಂದ ನಿರ್ಗಮಿಸಲಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ದಸರಾ ಆಚರಣೆಗೆ 10 ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ. ಅರಮನೆ ಆವರಣದಲ್ಲಿ ನಡೆಯಲಿರುವ ಆಚರಣೆಗಳಿಗೆ ತಗಲುವ ವೆಚ್ಚವನ್ನು ಅರಮನೆ ನಿರ್ವಹಣಾ ಸಮಿತಿಯು ಭರಿಸಲಿದೆ. ಇನ್ನು ಅರಮನೆಯ ಹೊರಭಾಗದಲ್ಲಿ ನಡೆಯಲಿರುವ ಆಚರಣೆಗಳಿಗೆ ತಗಲುವ ಅಂದಾಜು ವೆಚ್ಚಗಳ ವಿವರಣೆ ಒದಗಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಕೆಲವೆಡೆ ಸಿಎಸ್‍ಆರ್ ನಿಧಿ ಬಳಕೆ ಮಾಡುವಂತೆಯೂ ಸಲಹೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ದಸರಾ ವೇಳೆಗೆ ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್ ಹೈವೆ ಉದ್ಘಾಟನೆಯ ನಿರೀಕ್ಷೆಯಿತ್ತು. ಆದರೆ, ಮಳೆಯಿಂದಾಗಿ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ದಸರಾ ಮುಗಿದ ಒಂದು ತಿಂಗಳಲ್ಲಿ ಬಹುಷಃ ಎಕ್ಸ್ ಪ್ರೆಸ್ ಹೈವೆ ಉದ್ಘಾಟನೆ ಆಗಬಹುದು ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿಗೆ ಸೂಚನೆ: ದಸರಾ ಆಚರಣೆಯ ಸಿದ್ಧತೆಗಳಿಗಾಗಿ ಅಧಿಕಾರಿಗಳು ಸುಮಾರು ಮೂರು ತಿಂಗಳು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಈ ವೇಳೆ ಸಾರ್ವಜನಿಕರ ಕೆಲಸಗಳಿಗೆ ಯಾವುದೆ ತೊಂದರೆಯಾಗಬಾರದು. ಈ ಸಂಬಂಧ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಖಡಕ್ ಸೂಚನೆ ನೀಡಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಸಭೆಯಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಶಾಸಕರಾದ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ತನ್ವೀರ್ ಸೇಠ್, ಎಚ್.ವಿಶ್ವನಾಥ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮೈಸೂರು ಜಿಲ್ಲಾಧಿಕಾರಿ ಗೌತಮ್ ಬುಗಾದಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಆಚರಣೆ ಸಂಬಂಧ ನಡೆದ ಉನ್ನತಮಟ್ಟದ ಸಮಿತಿ ಸಭೆಯ ಕಾರ್ಯಸೂಚಿ ಪತ್ರಿಕೆಯಲ್ಲಿ 19/7/2022ರ ಬದಲಾಗಿ ‘19/7/2021’ ಎಂದು ಮುದ್ರಿಸಲಾಗಿದೆ. ಈ ಆಹ್ವಾನ ಪತ್ರಿಕೆಯನ್ನು ತಮ್ಮ ಟ್ವೀಟರ್‍ನಲ್ಲಿ ಪೋಸ್ಟ್ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ಸರಕಾರ, 2021ರಲ್ಲಿಯೇ ಉಳಿದುಬಿಟ್ಟಿದೆ ‘ಟೇಕ್ ಆಫ್' ಆಗಿಯೇ ಇಲ್ಲ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೇ? ಎಂದು ಟೀಕಿಸಿದ್ದಾರೆ.