ಹೆಂಡತಿಯನ್ನು ಎಟಿಎಂನಂತೆ ಉಪಯೋಗಿಸುವುದು ಮಾನಸಿಕ ಕಿರುಕುಳಕ್ಕೆ ಸಮ: ಹೈಕೋರ್ಟ್
ಬೆಂಗಳೂರು, ಜು.19: ಯಾವುದೇ ಭಾವನಾತ್ಮಕ ಸಂಬಂಧವಿಲ್ಲದೇ ಹೆಂಡತಿಯನ್ನು ಹಣ ನೀಡುವ ಹಸು ಅಥವಾ ಎಟಿಎಂಗಳಂತೆ ಉಪಯೋಗಿಸಿಕೊಳ್ಳುವುದು ಮಾನಸಿಕ ಕಿರುಕುಳಕ್ಕೆ ಸಮಾನವಾಗಿದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಲ್ಲದೇ, ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿ ಮಹಿಳೆಗೆ ಪತಿಯಿಂದ ವಿಚ್ಛೇದನವನ್ನೂ ನೀಡಿದೆ.
ಗಂಡನಿಂದ ವಿಚ್ಛೇದನ ನೀಡದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಅಲೋಕ್ ಆರಾಧೆ ಮತ್ತು ನ್ಯಾ.ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ಪೀಠ, ಈ ತೀರ್ಪು ನೀಡಿದೆ.
ಗಂಡ ಹೆಂಡತಿಯೊಂದಿಗೆ ಯಾವುದೇ ಭಾವನಾತ್ಮಕ ಸಂಬಂಧವನ್ನು ಹೊಂದಿಲ್ಲ. ಕೇವಲ ಯಾಂತ್ರಿಕವಾಗಿ ಗಂಡನ ಕರ್ತವ್ಯವನ್ನು ಪೋಷಿಸಿದ್ದಾರೆ. ವ್ಯಾಪಾರದ ನೆಪದಲ್ಲಿ ಹೆಂಡತಿಯಿಂದ ಸುಮಾರು 60 ಲಕ್ಷ ರೂ. ಹಣವನ್ನು ಗಂಡ ಇಸಿದುಕೊಂಡಿದ್ದಾರೆ. ಹೆಂಡತಿಯನ್ನು ಆತ ಕೇವಲ ಹಣ ನೀಡುವ ಎಟಿಎಂ ಆಗಿ ಉಪಯೋಗಿಸಿಕೊಂಡಿದ್ದಾರೆ. ಗಂಡನ ಈ ಸ್ವಭಾವದಿಂದಾಗಿ ಹೆಂಡತಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಇದು ಮಾನಸಿಕ ಕಿರುಕುಳಕ್ಕೆ ಸಮವಾಗುತ್ತದೆ ಎಂದು ನ್ಯಾಯಪೀಠವು ತಿಳಿಸಿದೆ.
ಈ ಕೇಸ್‍ನಲ್ಲಿ ಗಂಡನಿಂದ ಹೆಂಡತಿಗೆ ಆಗಿರುವ ನೋವು, ಮಾನಸಿಕ ಕಿರುಕುಳ ಎಂದು ಪರಿಗಣಿಸಬಹುದು. ಕೌಟುಂಬಿಕ ನ್ಯಾಯಾಲಯ ಈ ಎಲ್ಲ ಅಂಶಗಳನ್ನು ಪರಿಗಣಿಸಲು ವಿಫಲವಾಗಿದೆ. ಅಲ್ಲದೆ, ನ್ಯಾಯಾಲಯವು ಮಹಿಳೆಯನ್ನು ಪೂರ್ಣ ವಿಚಾರಿಸದೇ ಬರೀ ಹೇಳಿಕೆಗಳನ್ನು ಮಾತ್ರ ದಾಖಲಿಸಿದೆ ಎಂದಿದೆ.
ಮಹಿಳೆಯ ವಾದವನ್ನು ಪರಿಗಣಿಸಿರುವ ನ್ಯಾಯಪೀಠ, ಅವರಿಗೆ ವಿಚ್ಛೇದನ ನೀಡಿದೆ. ಕೌಟುಂಬಿಕ ಕಲಹದ ಕೇಸ್‍ಗಳಲ್ಲಿ ಕ್ರೌರ್ಯದ ಆರೋಪಗಳನ್ನು ಪ್ರಕರಣದ ಅರ್ಹತೆಯ ಮೇಲೆ ಪರಿಶೀಲಿಸಬೇಕು ಎಂದು ಪೀಠವು ಹೇಳಿದೆ.
ಏನಿದು ಪ್ರಕರಣ: ಮೂರು ದಶಕಗಳ ಹಿಂದೆ ವಿವಾಹವಾದ ದಂಪತಿ ಒಂದು ಹೆಣ್ಣು ಮಗುವನ್ನು ಹೊಂದಿದ್ದರು. ವ್ಯಾಪಾರ ನಡೆಸಿಕೊಂಡು ಹೋಗುತ್ತಿದ್ದ ಪತಿ ಸಾಲದ ಸುಳಿಗೆ ಸಿಲುಕಿದ್ದ. ಮರುಪಾವತಿಸಲು ಕಷ್ಟಪಡುತ್ತಿದ್ದರು. ಇದು ಮನೆಯಲ್ಲಿ ಪ್ರತಿದಿನ ಗಲಾಟೆಗೆ ಕಾರಣವಾಗಿತ್ತು. ಈ ವೇಳೆ ಮಹಿಳೆ ಜೀವನ ನಿರ್ವಹಣೆಗಾಗಿ ಬ್ಯಾಂಕ್‍ವೊಂದರ ಉದ್ಯೋಗಕ್ಕೆ ಸೇರಿಕೊಂಡಿದ್ದರು.
2008ರಲ್ಲಿ ಹೆಂಡತಿ ತನ್ನ ಗಂಡನಿಗೆ ದುಬೈನಲ್ಲಿ ಸಲೂನ್ ತೆರೆಯಲು 60 ಲಕ್ಷ ಹಣವನ್ನು ನೀಡಿದ್ದಾರೆ. ಆದರೆ, ನಷ್ಟಕ್ಕೀಡಾದ ಪತಿ ಭಾರತಕ್ಕೆ ವಾಪಸ್ ಆಗಿದ್ದರು. ಹಣ ನೀಡಲು ಪೀಡಿಸುತ್ತಿದ್ದ ಪತಿಯಿಂದ ಮಹಿಳೆ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಕರಣದಲ್ಲಿ ಯಾವುದೇ ತಿರುಳಿಲ್ಲ ಎಂದು ಕೋರ್ಟ್ ಅರ್ಜಿ ವಜಾ ಮಾಡಿತ್ತು. ಇದರ ವಿರುದ್ಧ ಆ ಮಹಿಳೆ ಹೈಕೋರ್ಟ್ ಮೊರೆ ಹೋಗಿದ್ದರು.