ಐಎಂಎ ಬಹುಕೋಟಿ ವಂಚನೆ ಹಗರಣ: ಹೈಕೋರ್ಟ್ ಮೆಟ್ಟಿಲೇರಿದ ಆರ್.ರೋಷನ್ ಬೇಗ್
ಬೆಂಗಳೂರು, ಜು.19: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಮಾಜಿ ಸಚಿವ ಆರ್.ರೋಷನ್ ಬೇಗ್ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್, ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ.
ಮಾಜಿ ಸಚಿವ ರೋಷನ್ ಬೇಗ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ.
ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಮಾಡಲಾಗಿರುವ ಸಿಬಿಐ, ಕಮರ್ಶಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಅಧಿಕಾರಿ ಹಾಗೂ ದೂರುದಾರರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ.
ಬಹುಕೋಟಿ ಹಗರಣದಲ್ಲಿ ರೋಷನ್ ಬೇಗ್ ವಿರುದ್ಧ ಐಪಿಸಿ ಕಲಂ 406, 409 ಮತ್ತು 120 ಬಿ ಹಾಗೂ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆದಾರರ ಹಿತರಕ್ಷಣಾ (ಕೆಪಿಐಡಿಇಎಫ್) ಕಾಯ್ದೆ-2004ರ ಅನ್ವಯ 2019ರ ಅಕ್ಟೋಬರ್ ನಲ್ಲಿ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಈ ಸಂಬಂಧ ಸಿಟಿ ಸಿವಿಲ್ ಕೋರ್ಟ್ ನ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಬೇಕು ಎಂದು ಬೇಗ್ ಮನವಿ ಮಾಡಿದ್ದಾರೆ.
ಏನಿದು ಆರೋಪ: ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಇಷ್ತಿಯಾಕ್ ಎನ್ನುವವರು ಪೊಲೀಸ್ ಅಧಿಕಾರಿಗಳ ಎದುರು ನೀಡಿದ್ದ ಸ್ವಯಂ ಹೇಳಿಕೆಯಲ್ಲಿ, ಮನ್ಸೂರ್ ಖಾನ್ ಅವರು ರೋಷನ್ ಬೇಗ್‍ಗೆ 2018ರ ವಿಧಾನಸಭೆ ಚುನಾವಣೆಯಲ್ಲಿ 2 ಕೋಟಿಗೂ ಅಧಿಕ ಹಣ ನೀಡಿದ್ದರು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪ್ರಕರಣದ ಸಾಕ್ಷಿ ಎಂದು ಪರಿಗಣಿಸಲಾಗಿದೆ. ಹೀಗಾಗಿ, ಬೇಗ್ ಐಎಂಎ ಕಂಪೆನಿಯ ಪ್ರಮೋಟರ್‍ರಾಗಿ ಸಂಸ್ಥೆಯ ಆರ್ಥಿಕ ಚಟುವಟಿಕೆ ಫಲಾನುಭವಿ ಎಂಬುದು ಸಿಬಿಐ ಅರೋಪ.