ಪ್ರಜಾಪ್ರಭುತ್ವದ ಆಶಯಗಳಂತೆ ಚುನಾವಣೆಗಳು ನಡೆಯುತ್ತಿಲ್ಲ: ಸ್ಪೀಕರ್ ಕಾಗೇರಿ ವಿಷಾದ

Update: 2022-07-19 16:06 GMT

ದಾವಣಗೆರೆ ಜು.19 : 'ಚುನಾವಣೆಗಳಲ್ಲಿ ದೇಶದ ಪ್ರತಿ ಪ್ರಜೆಯೂ ನನ್ನ ಮತ ಮಾರಾಟಕ್ಕಿಲ್ಲ ಎಂದು ಮುಕ್ತ, ನಿರ್ಭೀತ, ನ್ಯಾಯಸಮ್ಮತ ಚುನಾವಣೆಗೆ ಆಗ್ರಹಿಸುವ ಜನಾಂದೋಲನ ರೂಪಿಸುವ ದಿಕ್ಕಿನಲ್ಲಿ ಆಲೋಚಿಸಬೇಕಾಗಿದೆ'  ಎಂದು ವಿಧಾನ ಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು.

ಮಂಗಳವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಚುನಾವಣಾ ಸುಧಾರಣಾ ಕ್ರಮಗಳ ಕುರಿತು ಸಂವಾದ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.

'ಇಂದು ಪ್ರಜಾಪ್ರಭುತ್ವದ ಆಶಯಗಳಂತೆ ಚುನಾವಣೆಗಳು ನಡೆಯುತ್ತಿಲ್ಲ, ದೇಶದಲ್ಲಿ ಹಣಬಲ, ಜಾತಿಬಲ, ತೋಳುಬಲಗಳು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ಚುನಾವಣಾ ವ್ಯವಸ್ಥೆಯನ್ನು ಆಳುತ್ತಿವೆ. ಸಮಾಜದಲ್ಲಿ ಸಂಸದೀಯ ವ್ಯವಸ್ಥೆ ಉಳಿವಿಗಾಗಿ ಎಲ್ಲರೂ ಜವಾಬ್ದಾರಿ ವಹಿಸಬೇಕಾಗಿದೆ. ಮುಖ್ಯವಾಗಿ ಯುವಜನತೆ ವ್ಯವಸ್ಥೆಯ ಸುಧಾರಣೆಯ ಜವಾಬ್ದಾರರಾಗುವ ಜೊತೆಗೆ ತಮ್ಮ ಮನೆಗಳಲ್ಲಿ, ಊರುಗಳಲ್ಲಿ ಚುನಾವಣಾ ಸುಧಾರಣಾ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಆಗಿವೆ, ದೇಶದಾದ್ಯಂತ ಅಮೃತ ಮಹೋತ್ಸವವನ್ನು ಹೆಮ್ಮೆಯಿಂದ ಆಚರಿಸಲು ಸಿದ್ಧತೆ ನಡೆಸಿದ್ದೇವೆ, ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆಗೆ ಭಾರತ ಜಗತ್ತಿಗೆ ಮಾರ್ಗದರ್ಶಕ ದೇಶವಾಗಿ ಅಭಿವೃದ್ಧಿ ಹೊಂದಬೇಕು' ಎಂದರು.

'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು, ಹಾಗಾಗಿ ಚುನಾವಣೆ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಜೆಗಳ ಜವಾಬ್ದಾರಿ ದೊಡ್ಡದಿದೆ. ನ್ಯಾಯಸಮ್ಮತ ಮತ್ತು ಪರಿಶುದ್ಧ ಚುನಾವಣಾ ವ್ಯವಸ್ಥೆ ರೂಪಿಸುವುದು ಸಂವಿಧಾನದ ಆಶಯವಾಗಿದೆ. 18 ವರ್ಷ ಪೂರ್ಣಗೊಂಡ ದೇಶದ ಎಲ್ಲ ನಾಗರಿಕರಿಗೂ ಮತದಾನದ ಹಕ್ಕನ್ನು ನೀಡಲಾಗಿದೆ. ಎಷ್ಟೋ ದೇಶಗಳಲ್ಲಿ ಸಂವಿಧಾನ ಅಸ್ತಿತ್ವಕ್ಕೆ ಬಂದು ವರ್ಷಗಳೇ ಕಳೆದರೂ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ, ಆದರೆ, ನಮ್ಮ ದೇಶದಲ್ಲಿ ಸಂವಿಧಾನ ಜಾರಿಗೆ ಬಂದಾಗಲೇ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಯಿತು. ನಮ್ಮ ದೇಶದ ಸಂವಿಧಾನದ ವೈಶಿಷ್ಟ್ಯವೆಂದರೆ ಸಾಮಾನ್ಯರಲ್ಲಿ ಸಾಮಾನ್ಯರು ಈ ದೇಶದ ರಾಷ್ಟ್ರಪತಿ, ಪ್ರಧಾನಮಂತ್ರಿ ಆಗಬಹುದಾಗಿದೆ. ಆದ್ದರಿಂದ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಸಂವಿಧಾನ ಭಾರತದ ಸಂವಿಧಾನವಾಗಿದೆ ' ಎಂದರು.

'ಪ್ರಜಾಪ್ರಭುತ್ವದ ಎಲ್ಲಾ ಅಂಗಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತಿಲ್ಲ, ಅಲ್ಲಿಯೂ ಮೌಲ್ಯಾದರ್ಶಗಳ ಕೊರತೆ ಎದ್ದು ಕಾಣುತ್ತಿದೆ, ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಕಾರ್ಯಗಳು ಮತ್ತಷ್ಟು ಗಟ್ಟಿಗೊಳ್ಳಬೇಕಾಗಿದೆ. ಶೇಷನ್ ಅಂತಹವರು ಇರುವ ಕಾಯ್ದೆಗಳನ್ನೇ ಬಳಸಿ ಚುನಾವಣಾ ಆಯೋಗವನ್ನು ಗಟ್ಟಿಗೊಳಿಸಿದ್ದರು ಎಂದರು.

'ಈ ಎಲ್ಲಾ ಕೊರತೆಗಳ ಮಧ್ಯೆಯೂ ನಮ್ಮ ದೇಶ ಬಲಿಷ್ಟವಾಗಿದೆ ಎಂದರೆ ವಿವಿಧ ವಲಯದ ಮುಖ್ಯಸ್ಥರು, ನಮ್ಮ ಹಿರಿಯರು ಸಾಕಷ್ಟು ಶ್ರಮಿಸಿದ್ದಾರೆ, ದೋಷ ದೌರ್ಬಲ್ಯಗಳು ಏನೇ ಇದ್ದರೂ ಅವುಗಳನ್ನ ಪಕ್ಕಕ್ಕಿಟ್ಟು ಪ್ರಜಾಪ್ರಭುತ್ವದ ಏಳಿಗೆಗಾಗಿ ದುಡಿಯಬೇಕಾಗಿದೆ ಎಂದು' ಹೇಳಿದರು.  

ಶಾಸಕ ಎಸ್.ಎ ರವೀಂದ್ರನಾಥ್, ಮೇಯರ್ ಜಯಮ್ಮ ಗೋಪಿನಾಯ್ಕ್, ಜಿಲ್ಲಾಧಿಕಾರಿ ಶಿವಾನಂದ ಕಪಾಶಿ,   ಜಿಪಂ ಸಿಇಒ ಡಾ.ಎ ಚನ್ನಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಬಸವಂತಪ್ಪ ಮಲ್ಲಪ್ಪನವರ್ ಕುಂಬಾರ, ಉಪವಿಭಾಗಾಧಿಕಾರಿ ದುರ್ಗಾಶ್ರೀ ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

------------------------------------

ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗಿಂತ ನೋಟಾಕ್ಕೆ ಶೇ.50ಕ್ಕಿಂತ ಹೆಚ್ಚಿನ ಮತದಾನವಾದರೆ, ಆ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲರನ್ನು ಮುಂದಿನ ಚುನಾವಣೆಗೆ ಸ್ಪರ್ಧಿಸದಂತೆ ತಡೆಹಿಡಿಯಬೇಕು.

-ತೋರಣನಾಯ್ಕ್ ರಾಜ್ಯಶಾಸ್ತ್ರ ಉಪನ್ಯಾಸಕ

-------------------------------------------------------

ಚುನಾವಣೆಯಲ್ಲಿ ಮತ ಮಾರಾಟ ಮಾಡಿಕೊಳ್ಳುವವರಿಗಿಂತ ಮೊದಲು, ಸ್ಪರ್ಧಿಸುವ ಅಭ್ಯರ್ಥಿಗಳು ಖರೀದಿ ಮಾಡಿಕೊಳ್ಳಲ್ಲ ಎಂದು ನಿರ್ಧಾರ ಮಾಡಬೇಕು. ಹಾಗೂ ಪಕ್ಷಾಂತರ ಮಾಡುವವರಿಗೆ 5 ವರ್ಷ ನಿಷೇಧ ಹೇರಬೇಕು.

-ತೇಜಸ್ವಿ ಪಟೇಲ್ ರೈತ ಮುಖಂಡ.

----------------------------------------------

ಅಪರಾಧ ಹಿನ್ನಲೆ ಹೊಂದಿರುವವರು ಜಾಮೀನು ಪಡೆದು, ನಂತರ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬರುತ್ತಾರೆ. ಈ ವಿಷಯದ ಕುರಿತು ಗಂಭೀರವಾಗಿ ಚರ್ಚೆ ನಡೆಸಬೇಕಾಗಿದೆ.

-ಬಸವರಾಜ್ ಕಾನೂನು ವಿದ್ಯಾರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News