ಆಂಬ್ಯುಲೆನ್ಸ್ ನಿರ್ವಹಣೆಗೆ ಹೈಟೆಕ್ ತಂತ್ರಜ್ಞಾನ: ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ
ಬೆಂಗಳೂರು, ಜು.19: ಆಂಬ್ಯುಲೆನ್ಸ್ಗಳ ಸುಗಮ ಸಂಚಾರಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ನಿರ್ವಹಣಾ ವ್ಯವಸ್ಥೆ ಜಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದರೂ ರಾಜ್ಯ ಸರಕಾರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರುವ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಈವರೆಗೆ ಕೈಗೊಂಡ ಕ್ರಮಗಳ ಕುರಿತಂತೆ ವರದಿ ಸಲ್ಲಿಸಲು ಸೂಚನೆ ನೀಡಿದೆ.
ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮನವಿ ಆಲಿಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ರಾಜ್ಯ ಸರಕಾರಕ್ಕೆ ಈ ಸೂಚನೆ ನೀಡಿದೆ.
ಸರಕಾರದ ಪರ ವಾದಿಸಿದ ವಕೀಲರು, ರಾಜ್ಯ ಸರಕಾರವು ಜೀವ ರಕ್ಷಣೆ ಮತ್ತು ಸಂರಕ್ಷಣೆ ಕರ್ತವ್ಯ ಮತ್ತು ಕ್ರಮಗಳನ್ನು ತೆಗೆದುಕೊಳ್ಳಲು ಬದ್ಧವಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಟೆಂಡರ್ ಆಹ್ವಾನಿಸುವ ಪ್ರಸ್ತಾವನೆಗೆ ಸಂಪುಟ ನಿರ್ಣಯ ಕೈಗೊಂಡು ಅನುಮೋದನೆ ನೀಡಿದ್ದು, 1,260 ಕೋಟಿ ರೂ.ಗೆ ಟೆಂಡರ್ ಕರೆಯಲು 2022ರ ಮಾ.4ರಂದು ಸರಕಾರಿ ಆದೇಶ ಹೊರಡಿಸಿದೆ. ಟೆಂಡರ್‌ನಲ್ಲಿ ಜಿಪಿಎಸ್ ಅಳವಡಿಸಿದ ಆಂಬ್ಯುಲೆನ್ಸ್ಗಳು, ತುರ್ತು ನಿಯಂತ್ರಣ ಕೊಠಡಿ ಮತ್ತು ಕಾಲ್ ಸೆಂಟರ್ ಸ್ಥಾಪನೆಯನ್ನು ಕಲ್ಪಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.