×
Ad

ಸಿದ್ದರಾಮಯ್ಯ, ಡಿಕೆಶಿ ನಾನೊಂದು ತೀರ ನೀನೊಂದು ತೀರ ಎಂಬಂತಾಗಿದ್ದಾರೆ: ಸಿಎಂ ಬೊಮ್ಮಾಯಿ ವ್ಯಂಗ್ಯ

Update: 2022-07-20 11:54 IST

ಮೈಸೂರು, ಜು.20: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾಪ ಬಹಳ ವರ್ಷಗಳಿಂದ ಸಿಎಂ ಆಗಬೇಕು ಎಂದು ಒದ್ದಾಡುತ್ತಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷರಾಗೇ ಅವರಿಗೆ ಕೆಲಸ ಮಾಡಲು ಅಲ್ಲಿ ಬಿಡುತ್ತಿಲ್ಲ ಎಂದು ಬಸವರಾಜ ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ ಎಂಬ ಡಿಕೆಶಿ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಚಾಮುಂಡೇಶ್ವರಿ ವರ್ಧಂತಿ ಹಿನ್ನಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ತರೆಳು ಹಾಗೂ ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯ ಬೀಚನಹಳ್ಳಿಯಲ್ಲಿರುವ ಕಬನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬುಧವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಡಿ.ಕೆ.ಶಿವಕುಮಾರ್ ಗೆ ಬಹಳ ದಿನಗಳ ಕನಸು ಸಿಎಂ ಆಗಬೇಕು ಎನ್ನುವುದು ಆದರೆ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಲೇ ಅವರ ಪಕ್ಷದವರೇ ಬಿಡುತ್ತಿಲ್ಲ, ಅವರ ಪಕ್ಷದಲ್ಲಿ ಏನು ನಡೆಯತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಮಾಜಿ ಮುಖ್ಯಮಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾನೊಂದು ತೀರ ನೀನೊಂದು ತೀರ ಎಂಬಂತಾಗಿದ್ದಾರೆ. ಹಾಗಾಗಿ ಅವರ ಪ್ಲೇಟ್ ನಲ್ಲಿ ಏನು ಬಿದ್ದಿದೆ ಎಂಬುದನ್ನು ನೋಡಿಕೊಳ್ಳಲಿ ಎಂದು ಕುಟುಕಿದರು.

ರಾಜ್ಯದ ಪಾಲಿನ ಜಿ.ಎಸ್.ಟಿ. ಮೊತ್ತ 8,800 ಕೋಟಿ ರೂ. ಇತ್ತೀಚೆಗೆ ಬಂದಿದೆ. ಜಿ.ಎಸ್.ಟಿ. ಒಪ್ಪಂದದ ಪ್ರಕಾರ ಐದು ವರ್ಷಗಳ ಕಾಲ ಮಾತ್ರ ಮರಳಿ ಕೊಡಬೇಕು ಎಂದಿದೆ. ಕಳೆದೆರಡು ವರ್ಷ ಕೋವಿಡ್ ಸಂದರ್ಭದಲ್ಲಿ ತೆರಿಗೆ ಸಂಗ್ರಹ ಆಗಿದಿದ್ದರೂ ಕೇಂದ್ರ ಸರಕಾರ ರಾಜ್ಯದ ಪಾಲಿನ ಜಿ.ಎಸ್.ಟಿ. ಪಾವತಿಸಿದೆ. ಹಾಗಾಗಿ ಜಿ.ಎಸ್.ಟಿ. ಬಂದಿಲ್ಲ ಎಂಬ ಆರೋಪ ಸರಿಯಲ್ಲ ಎಂದು ಹೇಳಿದರು.

ಜಿಪಂ, ತಾಪಂ ಚುನಾವಣೆ ಸಂಬಂಧ ಜು.22ರಂದು ಸುಪ್ರೀಂ ಕೋರ್ಟ್ ಗೆ ಕ್ಷೇತ್ರ ಪುನರ್ ವಿಂಗಡಣೆ ಕುರಿತು ಪ್ರಮಾಣ ಪತ್ರ ಸಲ್ಲಿಸುತ್ತೇವೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲಾ ತಾಲೂಕು ಪಂಚಾಯತ್ ಮತ್ತು ಬಿಬಿಎಂಪಿ ಚುನಾವಣೆ ನಡೆಸಲು ಸೂಕ್ತ ಕ್ರಮ‌ ಕೈಗೊಳ್ಳುತ್ತೇವೆ.

ಮೈಸೂರು ಮೇಯರ್ ಆಯ್ಕೆ ಚುನಾವಣೆ ಕುರಿತು ಮೀಸಲಾತಿ ನಿಗದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಯಲ್ಲಿ ನೀರಾವರಿ ಸಚಿವ ಗೋವಿಂದ ಕಾರಜೋಳ, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಲ್.ನಾಗೇಂದ್ರ, ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News