×
Ad

ಒಕ್ಕಲಿಗರ ಬೆಂಬಲ ಕೇಳುವುದರಲ್ಲಿ ತಪ್ಪೇನಿದೆ?: ಡಿ.ಕೆ.ಶಿವಕುಮಾರ್

Update: 2022-07-20 19:33 IST

ಬೆಂಗಳೂರು, ಜು.20: ಒಕ್ಕಲಿಗರು ಕಾಂಗ್ರೆಸ್ ಪರವಾಗಿ ನಿಲ್ಲಬೇಕೆಂದು ಕರೆ ನೀಡಿರುವ ತಮ್ಮ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಅವರು ಕನಸು ಕಾಣಲಿ, ಅದರಲ್ಲಿ ತಪ್ಪೇನಿದೆ. ನನಗೆ ನನ್ನ ಪಕ್ಷ ಮುಖ್ಯ. ಬೇರೆ ಪಕ್ಷದ ವಿಚಾರ ನಮಗೆ ಬೇಡ ಎಂದರು.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಒಂದು ಸಮುದಾಯದ ಪ್ರತಿನಿಧಿಯಾಗಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನನಗೆ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. 20 ವರ್ಷಗಳ ನಂತರ ಈ ಸಮುದಾಯದವರಿಗೆ ಉನ್ನತ ಜವಾಬ್ದಾರಿ ನೀಡಿದ್ದಾರೆ ಎಂದರು.

ಈ ಅವಕಾಶ ಕಳೆದುಕೊಳ್ಳಬೇಡಿ. ಎಲ್ಲರಿಗೂ ನೀವು ಒಂದು ಅವಕಾಶ ನೀಡಿದ್ದೀರಿ. ನನಗೂ ಒಂದು ಅವಕಾಶ ನೀಡಿ ಎಂದು ಕೇಳಿದ್ದೇನೆ. ಎಲ್ಲರಿಗೂ ಅವರದೇ ಆದ ಸ್ವಾಭಿಮಾನ ಇರುತ್ತದೆಯಲ್ಲವೇ? ದಲಿತರು ಎಲ್ಲರೂ ಒಟ್ಟಾಗಿ ದಲಿತ ಸಿಎಂ ಆಗಬೇಕು ಎನ್ನುತ್ತಾರೆ ಅದರಲ್ಲಿ ತಪ್ಪೇನಿದೆ? ಅದೇ ರೀತಿ ನಮ್ಮ ಸಮುದಾಯದವರೂ ಒಂದಾಗಲಿ ಎಂದು ನಾನು ಹೇಳಿದ್ದೇನೆ ಎಂದು ಶಿವಕುಮಾರ್ ತಿಳಿಸಿದರು.

ಒಕ್ಕಲಿಗ ಸಮಾಜಕ್ಕೆ ಶಿವಕುಮಾರ್ ಕೊಡುಗೆ ಏನು ಎಂದು ಕುಮಾರಸ್ವಾಮಿ ಪ್ರಶ್ನಿಸಿರುವ ವಿಚಾರವಾಗಿ ಕೇಳಿದಾಗ, ‘ನಾನು ಕುಮಾರಸ್ವಾಮಿಗೆ ಉತ್ತರ ಕೊಡಬೇಕಿಲ್ಲ. ರಾಜ್ಯದ ಜನರಿಗೆ ಉತ್ತರ ನೀಡುವ ಜವಾಬ್ದಾರಿ ಇದೆ. ನಾನು ಕೊಡುತ್ತೇನೆ. ಜನ ನನ್ನನ್ನು ಸುಮ್ಮನೆ 7 ಬಾರಿ ಗೆಲ್ಲಿಸಿದ್ದಾರಾ? ಕುಮಾರಸ್ವಾಮಿ ಅವರ ಧರ್ಮಪತ್ನಿ ವಿರುದ್ಧ ನನ್ನ ತಮ್ಮನನ್ನು ನಿಲ್ಲಿಸಿದ್ದೆ. ಎರಡೂ ಪಕ್ಷ ಆಗ ಒಂದಾಗಿತ್ತಲ್ಲ, ಆಗ ಜನ ನಮ್ಮನ್ನು ಸುಮ್ಮನೆ ಗೆಲ್ಲಿಸಿದರಾ? ಕುಮಾರಣ್ಣ ಸಂಸದರಾಗಿದ್ದಾಗ ನನ್ನ ವಿರುದ್ಧ ಸ್ಪರ್ಧಿಸಿದ್ದರು. ನಾನು ಕೊಡುಗೆ ನೀಡಿದ್ದಕ್ಕೆ, ಅವರಿಗಿಂತ ನಾನು ಉತ್ತಮ ಎಂಬ ಕಾರಣಕ್ಕೆ ಅಲ್ಲವೇ ಜನ ನನ್ನನ್ನು ಗೆಲ್ಲಿಸಿದ್ದು ಎಂದು ತಿರುಗೇಟು ನೀಡಿದರು.

ನೂರು ಜನ ಶಿವಕುಮಾರ್ ಬಂದರೂ ನಾನು ಹೆದರುವುದಿಲ್ಲ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರು ನನಗೆ ಹೆದರುತ್ತಾರೆ ಎಂದು ನಾನು ಹೇಳಿದ್ದೀನಾ? ಕೇವಲ ನೂರಲ್ಲ ಸಾವಿರ ಜನಕ್ಕೂ ಅವರು ಹೆದರುವುದಿಲ್ಲ’ ಎಂದರು.

ರಾಮನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು? ಸಂಸದ ಡಿ.ಕೆ.ಸುರೇಶ್ ಸ್ಪರ್ಧಿಸುತ್ತಾರಾ ಎಂದು ಕೇಳಿದಾಗ, ‘ಈ ವಿಚಾರವಾಗಿ ಸೋನಿಯಾ ಗಾಂಧಿ ಅವರು ಏನು ತೀರ್ಮಾನ ಮಾಡುತ್ತಾರೋ ನೋಡೋಣ. ಪಕ್ಷ ತೀರ್ಮಾನ ಮಾಡಿದಾಗ ತಿಳಿಯುತ್ತದೆ’ ಎಂದು ಉತ್ತರಿಸಿದರು.

ಶಿವಕುಮಾರ್ ಅವರೇ ರಾಮನಗರಕ್ಕೆ ಬರಲಿ ಎಂದು ಕುಮಾರಸ್ವಾಮಿ ಹಾಕಿರುವ ಸವಾಲಿನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ಹಾಗೂ ಅವರ ಮಧ್ಯೆ ದೊಡ್ಡ ಕುಸ್ತಿಗಳೇ ಆಗಿವೆ. ನಾನು ಅವರ ವಿರುದ್ಧ ಇನ್ನು ಎಷ್ಟು ಕುಸ್ತಿ ಮಾಡಲಿ. ಅವರ ವಿರುದ್ಧ ಕುಸ್ತಿ ಮಾಡಿಯೂ ಆಗಿದೆ, ಅವರ ಜತೆಯಲ್ಲಿ ಕೈ ಹಿಡಿದು ಸರಕಾರ ಮಾಡಿದ್ದೂ ಆಗಿದೆ. ಮಾಧ್ಯಮಗಳು ನಮ್ಮ ಕುಸ್ತಿ ಮಾಡಿಸಲು ಸಿದ್ಧರಿದ್ದೀರಿ. ಅವರಿಗೆ ಇಚ್ಛೆ ಇಲ್ಲದಿದ್ದರೂ ನೀವೇ ಮಾಡಿಸುತ್ತಿದ್ದೀರಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News