×
Ad

ಯಡಿಯೂರಪ್ಪರ ನೆರಳನ್ನೂ ಅಳಿಸಿ ಹಾಕಲು 'ಸಂತೋಷ ಕೂಟ' ಪಣ: ಕಾಂಗ್ರೆಸ್ ಟೀಕೆ

Update: 2022-07-20 20:44 IST

ಬೆಂಗಳೂರು, ಜು.20: ಯಡಿಯೂರಪ್ಪನವರ ನೆರಳನ್ನೂ ಬಿಡದಂತೆ ಅಳಿಸಿ ಹಾಕುವ ಪಣ ತೊಟ್ಟಿದೆ ‘ಸಂತೋಷ ಕೂಟ'. ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಅಧಿಕಾರ ಕಿತ್ತುಕೊಂಡಿದ್ದಲ್ಲದೆ ಅವರ ಆಪ್ತರನ್ನೂ ನಿಗಮ ಮಂಡಳಿಗಳಿಂದ ಕಿತ್ತು ಹಾಕಿದ್ದು ಬಿಜೆಪಿ/ಬಿಜೆಪಿ ಅಭಿಯಾನದ ಕಾರ್ಯಾಚರಣೆ. ನಿಷ್ಠೆ ಬದಲಿಸಿದ ಬಸವರಾಜ ಬೊಮ್ಮಾಯಿ ಅವರು ಈಗ ‘ಸಂತೋಷ’ದಿಂದ ಇರಲು ಬಯಸಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಕಾಂಗ್ರೆಸ್, ಬಸವರಾಜ ಬೊಮ್ಮಾಯಿ ಅವರೇ, ಆ ತೀರದಿಂದ ಈ ತೀರಕ್ಕೆ ಜಿಗಿದಿದ್ದೇಕೆ? ಅರ್ಥಾತ್, ಯಡಿಯೂರಪ್ಪ ಅವರ ತೀರದಿಂದ ಬಿ.ಎಲ್.ಸಂತೋಷ್ ಅವರ ತೀರಕ್ಕೆ ಶಿಫ್ಟ್ ಆಗಿದ್ದೀರಲ್ಲವೇ? ತಾವು ತೀರದಲ್ಲಿ ನಿಂತು ಯಡಿಯೂರಪ್ಪ ಅವರನ್ನು ನೀರಲ್ಲಿ ಉರುಳಿಸಿದ್ದೀರಲ್ವಾ? ಹಾಗೆಯೇ, ಸಿಎಂ ಒಂದು ತೀರ, ಮಂತ್ರಿಗಳು ಇನ್ನೊಂದು ತೀರ ಎಂಬಂತಾಗಿರುವುದನ್ನು ಸರಿಪಡಿಸಿಕೊಳ್ಳಿ ಎಂದು ತಿರುಗೇಟು ನೀಡಿದೆ.

ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಬಂಧಿತನಾದ ಗಣೇಶ್ ಭಟ್ ಬಗ್ಗೆ ಸರಕಾರ ರಹಸ್ಯ ಕಾಪಾಡುತ್ತಿರುವುದೇಕೆ? ಆರೋಪಿ ಗಣೇಶ್ ಭಟ್‍ಗೂ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೂ ಏನು ಸಂಬಂಧ? ಮಾಧ್ಯಮಗಳು ಹೇಳಿದಂತೆ ಈ ಆರೋಪಿ ಗೃಹ ಸಚಿವರಿಗೂ ಆಪ್ತನೇ? ಪಿಎಸ್‍ಐ ಹಗರಣದಲ್ಲಿ ಬಿಜೆಪಿಯ ಕಬಂದಬಾಹುಗಳು ಇನ್ನೆಷ್ಟು ಅಳ, ಅಗಳಕ್ಕೆ ಚಾಚಿಕೊಂಡಿವೆ? ಸಿಎಂ ಉತ್ತರಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ದಲಿತರ ಪಾಲಿನ ಗಂಗಾ ಕಲ್ಯಾಣದಲ್ಲಿ 431 ಕೋಟಿ ಲೂಟಿ. ದಲಿತರ ಪಾಲಿನ 7,000 ಕೋಟಿ ಅನುದಾನಕ್ಕೆ ಕನ್ನ. ದಲಿತ ವಿದ್ಯಾರ್ಥಿ ನಿಲಯದ ನಿವೇಶನವನ್ನು ಬಿಜೆಪಿ ಕಚೇರಿಗೆ ಕಬಳಿಕೆ. ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಕಡಿತ. ದಲಿತರ ಪಾಲಿನ ನಿಗಮಗಳಿಗೆ ಅನುದಾನ ಕಡಿತ. ದಲಿತರನ್ನು ದಮನಿಸುತ್ತಿದೆ ರಾಜ್ಯ ಬಿಜೆಪಿ ಎಂದು ಕಾಂಗ್ರೆಸ್ ದೂರಿದೆ.

ಬಿಜೆಪಿ ಸರಕಾರ ದಲಿತರ ಏಳಿಗೆಗೆ ಶ್ರಮಿಸುವುದಿರಲಿ ದಲಿತರ ಅಸ್ತಿತ್ವವನ್ನೇ ನಾಶ ಮಾಡಲು ಹುನ್ನಾರ ನಡೆಸಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ನಮ್ಮ ಸರಕಾರ ಪರಿಚಯಿಸಿದ ಎಸ್ಸಿಪಿ/ಟಿಎಸ್ಪಿ 7,000 ಕೋಟಿ ಅನುದಾನವನ್ನು ಬೇರೆಡೆಗೆ ವರ್ಗಾಯಿಸಿ ಅನ್ಯಾಯವೆಸಗಿ, ಈಗ ದಲಿತ ವಿದ್ಯಾರ್ಥಿಗಳ ಪಾಲಿನ ನಿವೇಶನವನ್ನೂ ಕಬಳಿಸುತ್ತಿದೆ ಬಿಜೆಪಿ ಎಂದು ಕಾಂಗ್ರೆಸ್ ಆರೋಪಿಸಿದೆ.

ರಾಷ್ಟ್ರಮಟ್ಟದಲ್ಲಿ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಕರ್ನಾಟಕದ ಪಿಎಸ್‍ಐ ಅಕ್ರಮವೇ ಪ್ರೇರಣೆಯಾಗಿರುವಂತಿದೆ. ಪ್ರತಿಭಾವಂತ ಯುವಜನರ ವೈದ್ಯಕೀಯ ವ್ಯಾಸಂಗದ ಕನಸಿಗೆ ಕೊಳ್ಳಿ ಇಡುವ ಸ್ಥಿತಿ ನಿರ್ಮಾಣ ಮಾಡಿದ್ದು ಬಿಜೆಪಿಯ ಭ್ರಷ್ಟ ಸ್ನೇಹಿ ಅಡಳಿತವೇ ಕಾರಣ ಎಂದು ಕಾಂಗ್ರೆಸ್ ದೂರಿದೆ.

ಪಿಎಸ್‍ಐ ಹಗರಣದಲ್ಲಿ ಕೋಟಿ ಕೋಟಿ ಲೂಟಿ ಮಾಡಲು ಹಣವಿದೆ, ಕಾಮಗಾರಿಗಳಲ್ಲಿ 40 ಪರ್ಸೆಂಟ್ ಕಮಿಷನ್ ದೋಚಲು ಹಣವಿದೆ. ಆದರೆ, ಜನೋಪಯೋಗಿ ಕೆಲಸಗಳನ್ನು ಕೇಳಿದಾಗ ‘ಬೊಕ್ಕಸದಲ್ಲಿ ಹಣವಿಲ್ಲ' ಎಂಬ ಸರಕಾರದ ಸಿದ್ದ ಉತ್ತರ ತಯಾರಿರುತ್ತದೆ. ನೆರೆ ಸಂತ್ರಸ್ತರಿಗೆ ಇದುವರೆಗೂ ಪ್ಯಾಕೇಜ್ ಘೋಷಿಸಲಿಲ್ಲ, ಕೇಂದ್ರದ ನೆರವೂ ಬರಲಿಲ್ಲ. ಇದೇನಾ ಡಬಲ್ ಇಂಜಿನ್‍ಗಳ-‘ವಿಕಾಸ್’ ಎಂದು ಕಾಂಗ್ರೆಸ್ ಕಿಡಿಗಾರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News