ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಮಲೆನಾಡು ಜನರಿಂದ ಮುಕ್ತವಾಗಲಿದೆ: ಶೃಂಗೇರಿ ರೈತ ಸಂಘ -ಹಸಿರು ಸೇನೆ ಆತಂಕ

Update: 2022-07-20 17:14 GMT
ಫೈಲ್ ಚಿತ್ರ

ಶೃಂಗೇರಿ, ಜು.20: ಕಸ್ತೂರಿ ರಂಗನ್ ವರದಿ ಜಾರಿಯಿಂದಾಗಿ ಮಲೆನಾಡು ಹಾಗೂ ಕರಾವಳಿ ಭಾಗದ ಜನರು ಭಾರೀ ತೊಂದರೆಗೀಡಾಗಲಿದ್ದಾರೆ. ಈ ಯೋಜನೆ ಜಾರಿಯಾದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮನುಷ್ಯರು ಕಾಡಿನಿಂದ ಹೊರ ಬಿದ್ದು, ಕೇವಲ ಪ್ರಾಣಿಗಳು ಹಾಗೂ ಕಾಡು ಮಾತ್ರ ಉಳಿಯುವಂತಾಗುತ್ತದೆ. ಆದ್ದರಿಂದ ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿಯಾಗಬಾರದು. ರಾಜ್ಯ ಸರಕಾರ ಈ ಸಂಬಂಧ ಸುಪ್ರೀಂ ಕೋರ್ಟ್‍ಗೆ ಸೂಕ್ತ ಅಫಿಡವಿಟ್ ಸಲ್ಲಿಸಬೇಕು ಎಂದು ತಾಲೂಕು ರೈತಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.

ಈ ಸಂಬಂಧ ಪ್ರಕಟನೆ ನೀಡಿರುವ ರೈತಸಂಘದ ತಾಲೂಕು ಕಾರ್ಯಾಧ್ಯಕ್ಷ ನವೀನ್ ಕರುವಾನೆ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಚಿಂತನ್ ಬೆಳಗೊಳ ಮತ್ತು ಮುಖಂಡ ಅಂಜನ್, ರಾಜ್ಯ ಹಾಗೂ ಕೇಂದ್ರ ಸರಕಾರಗಳು ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳನ್ನು ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ತರಲು ಮುಂದಾಗಿದ್ದು, ಈ ಯೋಜನೆ ಜಾರಿಯಾದಲ್ಲಿ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಸುಮಾರು 20,600 ಚದರ ಕಿಮೀ ಪ್ರದೇಶವನ್ನು ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಸಿದ್ಧತೆ ನಡೆಸಿದೆ. ಇದು ಇಲ್ಲಿನ ರೈತರು, ಕಾಮಿಕರು ಹಾಗೂ ಸಾರ್ವಜನಿಕರಿಗೆ ಮಾಡುತ್ತಿರುವ ಸರಕಾರಗಳು ಮಾಡುತ್ತಿರುವ ದ್ರೋಹವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಅರಣ್ಯ, ಪರಿಸರ ಸಂರಕ್ಷಣೆಗಾಗಿ ಹಾಲಿ ಚಾಲ್ತಿಯಲ್ಲಿರುವ ಅರಣ್ಯ ಯೋಜನೆ, ಕಾಯ್ದೆ, ಕಾನೂನುಗಳಿಂದಾಗಿ ಮಲೆನಾಡು ಭಾಗದಲ್ಲಿ ರೈತರು, ಸಾರ್ವಜನಿಕರು, ಕೃಷಿಕರು ಬದುಕಲು ಸಾಧ್ಯವಾಗುತ್ತಿಲ್ಲ. ಅರಣ್ಯ ಕಾಯ್ದೆಗಳಿಂದಾಗಿ ಮಲೆನಾಡು ಭಾಗದ ಕುಗ್ರಾಮಗಳಿಗೆ ಮೂಲಸೌಕರ್ಯಗಳನ್ನೂ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಮಲೆನಾಡು, ಕರಾವಳಿ ಭಾಗದ ಅರಣ್ಯ ಪ್ರದೇಶಗಳಲ್ಲಿ ಮನುಷ್ಯರೆಲ್ಲರೂ ಹೊರ ಬಿದ್ದು, ಕೇವಲ ಪ್ರಾಣಿಗಳು ಮಾತ್ರ ಇರುವಂತಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಮಲೆನಾಡು, ಕರಾವಳಿ ಭಾಗದ ಜನಪ್ರತಿನಿಧಿಗಳು ಸರಕಾರದ ಆದೇಶಗಳನ್ನು ಪಾಲಿಸಲು, ಜಾರಿ ಮಾಡಲು ಮಾತ್ರ ಇದ್ದಂತೆ ಕಾಣುತ್ತಿದೆ. ಸರಕಾರದ ಆದೇಶಗಳ ವಿರುದ್ಧದ ಜನರ ಅಭಿಪ್ರಾಯವನ್ನು ಈ ಜನಪ್ರತಿನಿಧಿಗಳು ಸರಕಾರಕ್ಕೆ ಮುಟ್ಟಿಸುವ, ಮನವರಿಕೆ ಮಾಡುವ ಕೆಲಸ ಮಾಡದೇ ಸರಕಾರಗಳ ಗುಲಾಮರಂತೆ ಕಾರ್ಯನಿರ್ವಹಿಸುತ್ತಿರುವುದು ವಿಪರ್ಯಾಸ. ಕಸ್ತೂರಿರಂಗನ್ ವರದಿ ಜಾರಿ ವಿರುದ್ಧ ಮಲೆನಾಡು, ಕರಾವಳಿ ಭಾಗದಲ್ಲಿನ ಜನರು ಆತಂಕಕ್ಕೊಳಗಾಗಿ ಆಕ್ರೋಶ ಹೊರ ಹಾಕುತ್ತಿದ್ದರೂ ಜನಪ್ರತಿನಿಧಿಗಳು ಮಾತ್ರ ಜನರ ಸಮಸ್ಯೆ ಆಲಿಸಿ ಸರಕಾರದ ಗಮನಸೆಳೆಯಲು ಮುಂದಾಗದೇ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುವ ಮೂಲಕ ಜನವಿರೋಧಿಗಳಾಗಿದ್ದಾರೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು. ಅರಣ್ಯ ಸಂರಕ್ಷಣೆಗೆ ಈಗಾಗಲೇ ಸಾಕಷ್ಟು ಕಾಯ್ದೆ, ಕಾನೂನುಗಳಿದ್ದು, ಈ ಕಾನೂನುಗಳ ಹೊರತಾಗಿ ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಇಡೀ ಮಲೆನಾಡಿನ ಜನರು ಧಂಗೆ ಏಳುವುದು ನಿಶ್ಚಿತ. ಆದ್ದರಿಂದ ರಾಜ್ಯ ಸರಕಾರ ಈ ವರದಿ ಜಾರಿಯಾಗುವುದನ್ನು ತಡೆಯಲು ಎನ್‍ಜಿಟಿಗೆ ಸೂಕ್ತ ಅಫಿಡವಿಟ್ ಸಲ್ಲಿಸಬೇಕು. ಈ ಭಾಗದ ಜನಪ್ರತಿನಿಧಿಗಳು ಕಸ್ತೂರಿರಂಗನ್ ವರದಿ ಜಾರಿ ವಿರುದ್ಧ ಧ್ವನಿ ಎತ್ತುವ ಮೂಲಕ, ಜನಾಭಿಪ್ರಾಯವನ್ನು ಸರಕಾರಕ್ಕೆ ಮುಟ್ಟಿಸುವ ಮೂಲಕ ತಾವು ಜನರ ಪರ ಇದ್ದೇವೆ ಎಂಬುದನ್ನು ರುಜುವಾತು ಮಾಡಬೇಕೆಂದು ಮುಖಂಡರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News