PSI ನೇಮಕಾತಿ ಹಗರಣ | ಪೊಲೀಸ್ ಅಧಿಕಾರಿ, ಕಳಂಕಿತ ಅಭ್ಯರ್ಥಿಗಳಿಂದ ಕೂಡಿದ ಜೇಡರ ಬಲೆ: ಹೈಕೋರ್ಟ್ ಗೆ ಮಾಹಿತಿ

Update: 2022-07-20 17:41 GMT

ಬೆಂಗಳೂರು, ಜು.20: ಪಿಎಸ್ಸೈ ನೇಮಕಾತಿ ಅಕ್ರಮ ಹಗರಣವು ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳು, ಕಳಂಕಿತ ಅಭ್ಯರ್ಥಿಗಳನ್ನು ಒಳಗೊಂಡ ಜೇಡರ ಬಲೆಯಲ್ಲದೇ ಬೇರೇನೂ ಅಲ್ಲ ಹಾಗೂ ಪರೀಕ್ಷಾ ಕೊಠಡಿಯಲ್ಲಿ ಕಳಂಕಿತ ಅಭ್ಯರ್ಥಿಗಳು ಪರೀಕ್ಷೆ ಬರೆಯದೆ ಸುಮ್ಮನೆ ಕುಳಿತಿರುವುದು ಸಿಐಡಿಗೆ ಲಭಿಸಿದ ಸಿಸಿಟಿವಿ ದೃಶ್ಯಾವಳಿಗಳಿಂದ ಬಹಿರಂಗವಾಗಿದೆ ಎಂದು ಸರಕಾರಿ ಪರ ವಕೀಲರು ಹೈಕೋರ್ಟ್‍ಗೆ ಮಾಹಿತಿ ಸಲ್ಲಿಸಿದ್ದಾರೆ.   

ಪಿಎಸ್ಸೈ ನೇಮಕಾತಿ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳಾದ ಸಿ.ಎನ್.ಶಶಿಧರ್ ಹಾಗೂ ಇನ್ನಿತರರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾ.ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.

ಸರಕಾರದ ಪರ ವಾದಿಸಿದ ವಕೀಲರು, ಪಿಎಸ್ಸೈ ಪರೀಕ್ಷೆಯಲ್ಲಿ 100 ಪ್ರಶ್ನೆಗಳಿಗೆ 16ರಿಂದ 20ಕ್ಕೆ ಮಾತ್ರ ಉತ್ತರಿಸಿದ್ದಾರೆ. ಆದರೆ, ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯ ಪ್ರಕಾರ ಓಎಂಆರ್ ಹಾಳೆಗಳನ್ನು ತಿದ್ದುವ ಮೂಲಕ ಕಳಂಕಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಸಿಐಡಿಯ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸರಕಾರಿ ಪರ ವಕೀಲರು ಸಲ್ಲಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News