ಮುಂದಿನ ತಿಂಗಳಲ್ಲಿ ಮೈಷುಗರ್ ಕಾರ್ಖಾನೆ ಆರಂಭ: ಸಿಎಂ ಬೊಮ್ಮಾಯಿ

Update: 2022-07-20 17:54 GMT
(ಕೆಆರ್ ಎಸ್ ಜಲಾಶಯಕ್ಕೆ ಸಿಎಂ ಬೊಮ್ಮಾಯಿ ಬಾಗಿನ ಅರ್ಪಿಸುತ್ತಿರುವುದು)

ಮಂಡ್ಯ, ಜು.20: ಮೈಷುಗರ್ ಕಾರ್ಖಾನೆಯನ್ನು ಸರಕಾರಿ ಸ್ವಾಮ್ಯದಲ್ಲೇ ಆರಂಭಿಸಲು ಸಿದ್ದತೆಗಳು ನಡೆದಿದ್ದು, ಆಗಸ್ಟ್ ಎರಡನೇ ವಾರದಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬುಧವಾರ ಕೆಆರ್ ಎಸ್‍ನಲ್ಲಿ ಕೃಷ್ಣರಾಜಸಾಗರ ಜಲಾಶಯಕ್ಕೆ ಪತ್ನಿ ಜತೆ ಬಾಗಿನ ಅರ್ಪಣೆ ಮಾಡಿ ಮಾತನಾಡಿದ ಅವರು, ಜಿಲ್ಲೆಯ ಜನರ ಆಶಯದಂತೆ ಕಾರ್ಖಾನೆಯನ್ನು ಸರಕಾರಿ ಸ್ವಾಮ್ಯದಲ್ಲೇ ಆರಂಭಿಸಲಾಗುತ್ತಿದೆ. ಅಗತ್ಯವನ್ನು ಅನುದಾನವನ್ನು ಒದಗಿಸಲಾಗುವುದು ಎಂದರು.

ಕಾವೇರಿ ಈ ಭಾಗದ ಜೀವನದಿ. ಜನರ ಭಾಗ್ಯದ ಬಾಗಿಲನ್ನು ತೆರೆದಿರುವ ಈ ನದಿಗೆ ನನ್ನ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ. ಒಂದು ನದಿ ಆ ಪ್ರದೇಶದ ಕೇವಲ ಬೇಕು ಬೇಡಿಕೆಗಳನ್ನು ಪೂರೈಸುವುದು ಅಷ್ಟೇ ಅಲ್ಲ, ಒಂದು ಸಂಸ್ಕೃತಿಯನ್ನು ಹುಟ್ಟುಹಾಕುತ್ತದೆ. ಇಂತಹ ಈ ನದಿಯ ಸದುಪಯೋಗ ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದರು.

ಕನ್ನಂಬಾಡಿ ಕಟ್ಟೆಯನ್ನು ನಿರ್ಮಿಸಲು ಮೈಸೂರಿನ ಮಹಾರಾಜರು ಪಟ್ಟ ಶ್ರಮ, ತ್ಯಾಗ ಎಂದೂ ಮರೆಯಲು ಸಾಧ್ಯವಿಲ್ಲ. ಹಾಗೆಯೇ ಬೃಹತ್ ನೀರಾವರಿ ಯೋಜನೆ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಕಾರಣಕರ್ತರಾದ ದಿವಾನರಾಗಿದ್ದ ವಿಶ್ವೇಶ್ವರಯ್ಯನವರನ್ನೂ ಮನದಾಳದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಅವರು ಸ್ಮರಿಸಿದರು.

ಅಣೆಕಟ್ಟೆಯ ಗೇಟ್‍ಗಳು ಹಳೆಯದಾಗಿದ್ದು ದಿನಕ್ಕೆ ಸುಮಾರು 300 ಕ್ಯೂಸೆಕ್ಸ್ ನೀರು ಸೋರಿಕೆ ಆಗುತ್ತಿತ್ತು. ನಾನು ನೀರಾವರಿ ಮಂತ್ರಿಯಾಗಿದ್ದಾಗ ಗೇಟ್ ಬದಲಾವಣೆಗೆ ನಿರ್ಧರಿಸಿದೆ. ಮೊದಲು 16 ಗೇಟ್‍ಗಳನ್ನು ಬದಲಾಯಿಸಲಾಯಿತು. ಈಗ 136 ಗೇಟ್‍ಗಳಲ್ಲಿ ಇನ್ನೂ 61 ಗೇಟನ್ನು ಬದಲಾವಣೆ ಮಾಡಬೇಕಿದೆ.  61 ಗೇಟ್‍ಗಳನ್ನು ಒಂದೂವರೆ ವರ್ಷದಲ್ಲಿ ಬದಲಾವಣೆ ಮಾಡಿದ ನಂತರ ಅಣೆಕಟ್ಟೆಯ 75ನೇ ವರ್ಷವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಅವರು ಘೋಷಿಸಿದರು.

ಗೇಟ್‍ಗಳ ಬದಲಾವಣೆಗೆ 160 ಕೋಟಿಗೂ ಹೆಚ್ಚಿನ ಅನುದಾನ ನೀಡಲಾಗಿದೆ.  560 ಕೋಟಿ ರೂ. ಅನುದಾನ ನೀಡಿ ವಿಶ್ವೇಶ್ವರ ನಾಲೆ ಹಾಗೂ ಉಪನಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇನ್ನೂ ಹೆಚ್ಚಿನ ನಾಲೆಗಳನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಿ ವಿಶ್ವೇಶ್ವರನಾಲೆಯ ಕೊನೆಯ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುವಂತೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಮಹಾರಾಜ ಕಾಲದ ಹೇಮಗಿರಿ, ಮಂದಗಿರಿ, ಚಾಮರಾಜ ಸೇರಿದಂತೆ 12 ಸಣ್ಣ ಸಣ್ಣ ಅಣೆಕಟ್ಟೆಗಳಿಂದ 94,000 ಎಕರೆಗೆ ನೀರು ಒದಗಿಸಲಾಗುತ್ತಿತ್ತು. ಇವುಗಳನ್ನೂ ಆಧುನೀಕರಣ ಮಾಡಲಾಗಿದೆ. ಕಬಿನಿ ಎಡ ದಂಡೆ, ಬಲದಂಡೆ ಸೇರಿದಂತೆ ಇನ್ನಿತರ ನಾಲೆಗಳ ಆಧುನೀಕರಣಕ್ಕಾಗಿ 480 ಕೋಟಿ ರೂ. ಮೀಸಲಿಡಲಾಗಿದೆ. ನೀರಿನ ಸದ್ಬಳಕೆಗಾಗಿ ಮೈಕ್ರೋ ನೀರಾವರಿ ಪದ್ಧತಿಯ ಬಗ್ಗೆ ಚಿಂತಿಸಲಾಗುತ್ತಿದೆ. ವಿಶ್ವವಿಖ್ಯಾತ ಕೆಆರ್‍ಎಸ್ ಉದ್ಯಾನವನವನ್ನೂ ಆಧುನೀಕರಣಗೊಳಿಸಿ ಇನ್ನೂ ಆಕರ್ಷಿತ ಮಾಡಲಾಗುವುದು ಎಂದು ಅವರು ಹೇಳಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಮಾತನಾಡಿ, ಕಾವೇರಿಕೊಳ್ಳದ ನಾಲ್ಕು ಜಲಾಶಯಗಳು ತುಂಬಿರುವುದು ಸಂತಸದ ವಿಷಯ. ಆದರೆ, ಮನುಷ್ಯನ ದುರಾಸೆಯಿಂದ ನದಿ, ಕೆರೆ, ಕಟ್ಟೆಗಳು ಕಲುಷಿತವಾಗಿವೆ. ಹಲವೆಡೆ ಒತ್ತುವರಿಆಗಿವೆ. ಈ ನೈಸರ್ಗಿಕ ಸಂಪತ್ತನ್ನು ಮುಂದಿನ ಪೀಳಿಗೆಗೆ ರಕ್ಷಿಸಿ ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕರೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಎಂ.ಶ್ರೀನಿವಾಸ್, ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಕೆ.ಅನ್ನದಾನಿ, ಎಲ್.ನಾಗೇಂದ್ರ, ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ,  ಮೈಸೂರು ಮೇಯರ್ ಸುನಂದ ಪಾಲನೇತ್ರ, ಕಾವೇರಿ ನೀರಾವರಿ ನಿಗದಮ ವ್ಯವಸ್ಥಾಪಕ ನಿರ್ದೇಶಕ ಶಂಕರೇಗೌಡ, ಜಿಲ್ಲಾಧಿಕಾರಿಗಳಾದ ಎಸ್.ಅಶ್ವಥಿ, ಡಾಬಗಾದಿ ಗೌತಮ್, ಎಸ್ಪಿ ಎನ್.ಯತೀಶ್, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News