ಈಶ್ವರಪ್ಪ ವಿರುದ್ಧ 'ಬಿ'ರಿಪೋರ್ಟ್; ಪೊಲೀಸ್ ತನಿಖೆ ಸರ್ಕಾರದ ಮಾನ ಉಳಿಸಲು ನಡೆಸಿರುವ ನಾಟಕ ಎಂದ ಸಿದ್ದರಾಮಯ್ಯ

Update: 2022-07-21 04:51 GMT

ಬೆಂಗಳೂರು: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿ, ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್‌ ನ್ಯಾಯ ಸಿಗಬಹುದೆಂಬ ಭರವಸೆಯಿಂದ ಕಾಯುತ್ತಿದ್ದ ಮೃತನ ಕುಟುಂಬದ ನೋವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು,  'ಇದೇ ಕಾರಣಕ್ಕಾಗಿ ನಾನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದು.  ತನಿಖೆಗೆ ಮೊದಲೇ ಮುಖ್ಯಮಂತ್ರಿಗಳಾದಿಯಾಗಿ ಸಚಿವರು, ಬಿಜೆಪಿ ಶಾಸಕರು ಆರೋಪಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು. ಇದನ್ನೇ ಪೊಲೀಸ್ ಇಲಾಖೆ ಸ್ವಲ್ಪ ತಡವಾಗಿ ಬಿ ರಿಪೋರ್ಟ್ ರೂಪದಲ್ಲಿ ನೀಡಿದೆ. ಇದರಲ್ಲಿ ಆಶ್ಚರ್ಯಪಡುವಂತದ್ದು ಏನಿಲ್ಲ' ಎಂದು ಹೇಳಿದ್ದಾರೆ. 

'ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಮುನ್ನ ತನ್ನ ಸಾವಿಗೆ ಈಶ್ವರಪ್ಪ ಅವರೇ ನೇರಕಾರಣ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದರೂ, ಆರೋಪಿ ಸ್ಥಾನದಲ್ಲಿರುವ ಈಶ್ವರಪ್ಪ ಅವರನ್ನು ಒಮ್ಮೆಯೂ ವಿಚಾರಣೆ ನಡೆಸದಿರುವುದು ತನಿಖೆಯ ವಿಶ್ವಾಸಾರ್ಹತೆಯನ್ನು ತೋರಿಸುತ್ತದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ಆರೋಪಿ ಸ್ಥಾನದಲ್ಲಿರುವ ಮಾಜಿ ಸಚಿವ ಈಶ್ವರಪ್ಪ ಅವರನ್ನು ಸಂಪೂರ್ಣವಾಗಿ ಹೊರಗಿಟ್ಟು ನಡೆಸಿರುವ ಈ ಪೊಲೀಸ್ ತನಿಖೆ ಸರ್ಕಾರದ ಮಾನ ಉಳಿಸಲು ನಡೆಸಿರುವ ನಾಟಕ. ಈ ಭ್ರಷ್ಟ ಸರ್ಕಾರದ ಕಮಿಷನ್ ಹಪಹಪಿಗೆ ಇನ್ನಷ್ಟು ಜೀವಗಳು ಬಲಿಯಾಗದಿರಲಿ ಎಂದಷ್ಟೇ ಹಾರೈಸಬಲ್ಲೆ' ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News