×
Ad

ಹಿರಿಯ ಚಿಂತಕ, ಹೋರಾಟಗಾರ ಜಿ.ರಾಜಶೇಖರ್ ನಿಧನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಗಣ್ಯರಿಂದ ಸಂತಾಪ

Update: 2022-07-21 10:10 IST
 (ಜಿ.ರಾಜಶೇಖರ್)

ಬೆಂಗಳೂರು: ನಾಡಿನ ಹಿರಿಯ ಚಿಂತಕ, ಲೇಖಕ, ವಿಮರ್ಶಕ ಹಾಗೂ ಜನಪರ ಹೋರಾಟಗಾರ ಉಡುಪಿ ಕೊಳಂಬೆಯ ನಿವಾಸಿ ಜಿ.ರಾಜಶೇಖರ್ ಅವರ ನಿಧನಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ' ಕನ್ನಡದ ಹಿರಿಯ ವಿಮರ್ಶಕ, ನೇರ-ನಿಷ್ಠುರ ನಡವಳಿಕೆಯ ಪ್ರಖರ ಚಿಂತಕ ಮತ್ತು ಸೌಹಾರ್ದ ಬದುಕಿನ ಹೋರಾಟಗಾರ ಜಿ.ರಾಜಶೇಖರ್ ಅಗಲಿಕೆ ನಮ್ಮೆಲ್ಲರ ಪಾಲಿಗೆ ತುಂಬಿಕೊಳ್ಳಲಾಗದ ನಷ್ಟ. ಅವರ ಕುಟುಂಬ ಮತ್ತು ಸ್ನೇಹಿತರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ' ಎಂದು ತಿಳಿಸಿದ್ದಾರೆ.

'ಸಹಬಾಳ್ವೆಯ ಸಮಾಜ ನಿರ್ಮಾಣಕ್ಕೆ ದುಡಿದ ಪ್ರಖರ ಚಿಂತಕ, ವಿಮರ್ಶಕ, ಲೇಖಕ ಜಿ.ರಾಜಶೇಖರ್ ಅವರು ನಿಧನರಾದ ವಿಷಯ ತಿಳಿದು ಮನಸ್ಸಿಗೆ ನೋವಾಯಿತು. ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಸಂತಾಪಗಳನ್ನು ಸಲ್ಲಿಸುತ್ತೇನೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ ನಡೆಯುತ್ತಿದ್ದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳ ಬೆಳವಣಿಗೆಗಳ ಬಗ್ಗೆ ಅವರು ಓರ್ವ ಸೂಕ್ಷ್ಮಗ್ರಹಿಯಾಗಿದ್ದರು. ತಮ್ಮ ತೀಕ್ಷ್ಣವಾದ ಬರಹ-ಭಾಷಣಗಳ ಮೂಲಕ ಅದನ್ನು ಪ್ರಸ್ತುತಪಡಿಸುತ್ತಿದ್ದ ರೀತಿ ಅದ್ಭುತವಾದುದು. ಜಿ.ರಾಜಶೇಖರ್ ನಾಡಿನ ಪ್ರಖ್ಯಾತ ಲೇಖಕರಿಂದ ಸ್ವೀಕೃತಿ ಪಡೆದ ವ್ಯಕ್ತಿಯಾಗಿದ್ದರು. ಅವರು ರಾಜ್ಯದಲ್ಲಿ ಕೋಮು ಸಾಮರಸ್ಯ, ಶಾಂತಿ, ಸಹಬಾಳ್ವೆಗಾಗಿ ನಿರಂತರ ಶ್ರಮಿಸಿದರು. ಮನುಷ್ಯ ವಿರೋಧಿಯಾಗಿದ್ದ ಹಿಂದುತ್ವ ಫ್ಯಾಶಿಸ್ಟ್ ಸಿದ್ಧಾಂತಗಳನ್ನು ಅವರು ಕಟುವಾಗಿ ಟೀಕಿಸುತ್ತಿದ್ದರು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ನಾಸಿರ್ ಪಾಶ ಹಾಗೂ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಅಗ್ನಾಡಿ ಜಂಟಿ ಹೇಳಿಕೆಯಲ್ಲಿ ತೀವ್ರ ಸಂತಾಪ ಸೂಚಿಸಿದ್ದಾರೆ.

2019ರಿಂದ ಪ್ರೊಗ್ರೆಸಿವ್ ಸುಪ್ರ ನ್ಯೂಕ್ಲಿಯರ್ ಪಾಲ್ಸಿ (ಪಾರ್ಕಿಂಸನ್ ಪ್ಲಸ್) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಜಿ. ರಾಜಶೇಖರ್, ಶ್ವಾಸಕೋಸದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ತೀರಾ ಗಂಭೀರ ಸ್ಥಿತಿಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 

ಇದನ್ನೂ ಓದಿ... ಹಿರಿಯ ಚಿಂತಕ, ಹೋರಾಟಗಾರ ಜಿ.ರಾಜಶೇಖರ್ ನಿಧನ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News