ಕಲಬುರಗಿ | ಸೇತುವೆಯಲ್ಲಿ ಸ್ಕೂಟರ್ ನಿಲ್ಲಿಸಿ ನದಿಗೆ ಹಾರಿದ ಯುವತಿ
ಕಲಬುರಗಿ, ಜು.21: ಸ್ಕೂಟರ್ ಚಲಾಯಿಸಿಕೊಂಡು ಬಂದ ಯುವತಿಯೊಬ್ಬಳು ಸ್ಕೂಟರನ್ನು ಸೇತುವೆ ಮೇಲೆ ನಿಲ್ಲಿಸಿ ನದಿಗೆ ಹಾರಿದ ಘಟನೆ ಶಹಾಬಾದ ತಾಲೂಕಿನ ಸಮೀಪದ ಶಂಕರವಾಡಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಭಾಗ್ಯಶ್ರೀ ಬಸವರಾಜ್ ಹೊಸಳ್ಳಿ (21) ನದಿಗೆ ಹಾರಿದ ಯುವತಿಯಾಗಿದ್ದಾರೆ. ಇವರು ಬುಧವಾರ ಅಪರಾಹ್ನ 3 ಗಂಟೆ ಸುಮಾರಿಗೆ ಶಂಕರವಾಡಿ ಗ್ರಾಮದಲ್ಲಿರುವ ಕಾಗಿಣಾ ನದಿಯ ಸೇತುವೆಯಿಂದ ನದಿಗೆ ಜಿಗಿದಿದ್ದಾರೆನ್ನಲಾಗಿದೆ. ಇದನ್ನು ಗಮನಿಸಿದ ದೂರದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಬಂದಿದ್ದರೂ ಅಷ್ಟರಲ್ಲಿ ಯುವತಿ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರೆನ್ನಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ನಗರ ಠಾಣೆ ಪೊಲೀಸರು ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯನ್ನು ಆಧರಿಸಿ ಯುವತಿಯ ಗುರುತು ಪತ್ತೆ ಹಚ್ಚಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ, ಎನ್‌ಡಿಆರ್‌ಎಫ್ ತಂಡ, ಮೀನುಗಾರರು ಯುವತಿಗಾಗಿ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದು, ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.