ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ: ಯಡಿಯೂರಪ್ಪ ವಿಶ್ವಾಸ

Update: 2022-07-21 12:52 GMT

ಬೆಂಗಳೂರು, ಜು. 21: ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಯಾರು ಏನೇ ಹೇಳಿದರೂ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುವುದು ನಿಶ್ಚಿತ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದಲ್ಲಿ ‘ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರು' ಎಂಬಂತೆ ಚುನಾವಣೆಗೂ ಮೊದಲೇ ಸಿಎಂ ಕುರ್ಚಿಗಾಗಿ ಹಾದಿ-ಬೀದಿಯಲ್ಲಿ ಬಡಿದಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರು ಅಧಿಕಾರಕ್ಕೆ ಬಂದರೆ ತಾನೆ ಸಿಎಂ ಆಗುವುದು' ಎಂದು ಟೀಕಿಸಿದರು.

‘ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ತಿರಸ್ಕರಿಸಲಿದ್ದಾರೆ. ಚುನಾವಣೆ ವೇಳೆಗೆ ಅವರ ಆಂತರಿಕ ಕಚ್ಚಾಟ ಮತ್ತಷ್ಟು ಹೆಚ್ಚಾಗಲಿದೆ. ಬಿಜೆಪಿಗೆ ಮತದಾರರು ಮತ್ತೆ ಆಶೀರ್ವದಿಸಲಿದ್ದು, ನಮ್ಮ ನಿರೀಕ್ಷೆಯಂತೆ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ' ಎಂದು ಅವರು ನುಡಿದರು.

‘ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮತ್ತು ಸುತ್ತಮುತ್ತ ಪ್ರವಾಸ ಮಾಡಿಕೊಂಡು ಬರುತ್ತೇನೆ. ಕೆ.ಆರ್.ಪೇಟೆಯಲ್ಲಿ ಬಹಳ ಶ್ರಮ ಹಾಕಿ ವಿಜಯೇಂದ್ರನ ಪ್ರಯತ್ನದಿಂದ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ. ಈಗ ನಾರಾಯಣಗೌಡ ಜಿಲ್ಲೆಯಲ್ಲಿ ಮೂರು-ನಾಲ್ಕು ಕ್ಷೇತ್ರ ಗೆಲ್ಲುವ ವಾತಾವರಣ ಸೃಷ್ಟಿಸಿದ್ದಾರೆ. ಹೀಗಾಗಿ ದೊಡ್ಡ ಮಟ್ಟದ ಸಭೆ ಆಯೋಜಿಸಲಾಗಿದೆ' ಎಂದು ಯಡಿಯೂರಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News