×
Ad

ಲಂಚ ಪಡೆದ ಆರೋಪ: ದೋಷಾರೋಪ ಪಟ್ಟಿ ಸಲ್ಲಿಸದ ಎಸಿಬಿಗೆ ನಾಚಿಕೆಯಾಗಬೇಕು ಎಂದ ಹೈಕೋರ್ಟ್

Update: 2022-07-21 21:32 IST

ಬೆಂಗಳೂರು, ಜು.21: ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಆರೋಪಿ ಉಪ ತಹಶೀಲ್ದಾರ್ ಪಿ.ಎಸ್.ಮಹೇಶ್ ನ್ಯಾಯಾಂಗ ಬಂಧನವಾಗಿ 60 ದಿನಗಳು ಕಳೆದರೂ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅವರ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಅವರಿಗೆ ಎಸಿಬಿ ವಿಶೇಷ ಕೋರ್ಟ್ ನಲ್ಲಿ ಡಿಫಾಲ್ಟ್ ಜಾಮೀನು ಲಭಿಸಿದೆ. ಹೀಗಾಗಿ, ಹೈಕೋರ್ಟ್‍ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ತಹಶೀಲ್ದಾರ್ ಮಹೇಶ್ ಪರ ವಕೀಲರು ಹಿಂಪಡೆದಿದ್ದಾರೆ.

ಜಾಮೀನು ಕೋರಿ ಪಿ.ಎಸ್.ಮಹೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರ ನೇತೃತ್ವದ ನ್ಯಾಯಪೀಠವು ಅರ್ಜಿದಾರರ ಪರ ವಕೀಲ ಬಿ.ಎಲ್.ನಾಗೇಶ್ ಅವರ ವಾದವನ್ನು ಆಲಿಸಿ, ಅರ್ಜಿ ಹಿಂಪಡೆಯಲು ಅನುಮತಿ ನೀಡಿತು. 

ಬೆಳಗ್ಗೆ ವಿಚಾರಣೆ ಪ್ರಾರಂಭವಾಗುತ್ತಿದ್ದಂತೆಯೇ ಎಸಿಬಿ ಪರ ಸರಕಾರಿ ವಕೀಲರನ್ನು ಕುರಿತು ನ್ಯಾಯಮೂರ್ತಿ ಸಂದೇಶ್ ಅವರು, ಎಸಿಬಿ ಕಾನೂನಿನ ಅಡಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಾದಿಸಿದ್ದೀರಿ ಅಲ್ಲವೇ, ದೋಷಾರೋಪಪಟ್ಟಿ ಸಲ್ಲಿಸದೆ ಆರೋಪಿ ಮಹೇಶ್‍ಗೆ ಯಾಕೆ ಬೆಂಬಲವಾಗಿ ನಿಂತಿರಿ, ಎರಡು ತಿಂಗಳುಗಳೂ ಕಳೆದರೂ ದೋಷಾರೋಪಪಟ್ಟಿ ಸಲ್ಲಿಸಿಲ್ಲ, ಆರೋಪ ಪಟ್ಟಿ ಸಲ್ಲಿಸಲೂ ಕಾಲಮಿತಿ ಇದೆ ಎಂದು ನಿಮಗೆ ಗೊತ್ತಿಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಎಸಿಬಿ ಪರ ವಕೀಲರು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಇನ್ನೂ ಬಂದಿರಲಿಲ್ಲ. ಹೀಗಾಗಿ, ದೋಷಾರೋಪಪಟ್ಟಿ ಸಲ್ಲಿಸಲು ತಡವಾಯಿತೂ ಎಂದು ಪೀಠಕ್ಕೆ ತಿಳಿಸಿದರು. ಈ ವಾದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಮೊದಲು ದೋಷಾರೋಪಪಟ್ಟಿ ಸಲ್ಲಿಸಬೇಕು ಇಲ್ಲದಿದ್ದರೇ ಹೆಚ್ಚುವರಿ ದಾಖಲೆಗಳನ್ನಾದರೂ ಸಲ್ಲಿಸಬಹುದಿತ್ತಲ್ಲವೇ? ಇದರಿಂದ, ಆರೋಪಿಗೆ ಕಾನೂನಿನ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳಲು ಸಹಕಾರ ನೀಡಿದಂತೆ ಆಗುವುದಿಲ್ಲವೇ ಇನ್ನೇನು? ಎಸಿಬಿಯು ಅತ್ಯಂತ ಪ್ರಾಮಾಣಿಕ ಹಾಗೂ ಕಾನೂನು ಪ್ರಕಾರ ನಡೆದುಕೊಳ್ಳುತ್ತದೆ ಎಂದು ತಾವು ವಾದ ಮಾಡಿದ್ದೀರಿ. ಅಲ್ಲದೆ, ದೋಷಾರೋಪಪಟ್ಟಿ ಸಲ್ಲಿಸದೇ ಆರೋಪಿಗೆ ಏಕೆ ಬೆಂಬಲ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿತು.  

ಇದಕ್ಕೆ ಎಸಿಬಿ ಪರ ವಕೀಲರು, ಮಹೇಶ್ ಸಲ್ಲಿಸಿರುವ ಜಾಮೀನು ಅರ್ಜಿ ಕುರಿತಂತೆ ಕರ್ನಾಟಕ ಹೈಕೋರ್ಟ್‍ಗೆ ಸುಪ್ರೀಂಕೋರ್ಟ್ ಆದೇಶ ಮಾಡಿರುವುದನ್ನು ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಜಾಮೀನು ಅರ್ಜಿಯನ್ನು ವಿಚಾರಣೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ಮಾಡಿದೆ. ಕೇಸ್‍ನಲ್ಲಿ ನೀವು ಏಕೆ ದೋಷಾರೋಪಪಟ್ಟಿ ಸಲ್ಲಿಸಿಲ್ಲ. ಆರೋಪ ಪಟ್ಟಿಯನ್ನು 60 ದಿನಗಳೊಳಗೆ ಸಲ್ಲಿಸಬೇಕು ಎಂಬುದು ನಿಮಗೆ ಗೊತ್ತಿದೆಯೋ ಅಥವಾ ಇಲ್ಲವೋ. ಅಲ್ಲದೆ, ದೋಷಾರೋಪಪಟ್ಟಿ ಸಲ್ಲಿಸಿದ ನಂತರವೂ ಎಫ್‍ಎಸ್‍ಎಲ್ ವರದಿ ಸಲ್ಲಿಸಬಹುದಲ್ಲವೇ, ಭಷ್ಟಾಚಾರ ನಿಗ್ರಹ ದಳವನ್ನು ರಚಿಸಿರುವ ಉದ್ದೇಶವೇನು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೋ ಅಥವಾ ಲಂಚಕೋರರಿಗೆ ಬೆಂಬಲ ನೀಡುವುದಕ್ಕೋ? ನಿಮಗೆ ನಾಚಿಕೆಯಾಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ವಕೀಲರ ವಾದ ಆಲಿಸಿದ ನ್ಯಾಯಪೀಠವು, 60 ದಿನಗಳು ಮುಗಿದರೂ ಎಸಿಬಿ ತನಿಖಾಧಿಕಾರಿ ಯಾಕೆ ದೋಷಾರೋಪಪಟ್ಟಿ ಪಟ್ಟಿ ಸಲ್ಲಿಸಿಲ್ಲ ಎನ್ನುವುದಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿತು.  

ದೋಷಾರೋಪಪಟ್ಟಿ ಸಲ್ಲಿಸದ ನಿಮಗೆ ನಾಚಿಕೆಯಾಗಬೇಕು: ಎಸಿಬಿ ವಿರುದ್ಧ ಹೈಕೋರ್ಟ್ ಅಸಮಾಧಾನ

ಲಂಚ ಪಡೆದ ಪ್ರಕರಣದಲ್ಲಿ ನೀವು ಏಕೆ ದೋಷಾರೋಪಪಟ್ಟಿ ಸಲ್ಲಿಸಿಲ್ಲ. ಆರೋಪ ಪಟ್ಟಿಯನ್ನು 60 ದಿನಗಳೊಳಗೆ ಸಲ್ಲಿಸಬೇಕು ಎಂಬುದು ನಿಮಗೆ ಗೊತ್ತಿದೆಯೋ ಅಥವಾ ಇಲ್ಲವೋ. ದೋಷಾರೋಪಪಟ್ಟಿ ಸಲ್ಲಿಸಿದ ನಂತರವೂ ಎಫ್‍ಎಸ್‍ಎಲ್ ವರದಿ ಸಲ್ಲಿಸಬಹುದಲ್ಲವೇ, ಭಷ್ಟಾಚಾರ ನಿಗ್ರಹ ದಳವನ್ನು ರಚಿಸಿರುವ ಉದ್ದೇಶವೇನು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೋ ಅಥವಾ ಲಂಚಕೋರರಿಗೆ ಬೆಂಬಲ ನೀಡುವುದಕ್ಕೋ? ನಿಮಗೆ ನಾಚಿಕೆಯಾಗಬೇಕು ಎಂದು ನ್ಯಾ.ಸಂದೇಶ್ ಅವರಿದ್ದ ನ್ಯಾಯಪೀಠ ಎಸಿಬಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News