ಸಿದ್ದರಾಮಯ್ಯ ನನ್ನನ್ನು ಕಾಂಗ್ರೆಸ್ ಗೆ ಕರೆದಿಲ್ಲ, ಬಿಜೆಪಿಗೆ ಹೋಗಬೇಡ ಎಂದಿದ್ದಾರೆ: ಶಾಸಕ ಜಿ.ಟಿ.ದೇವೇಗೌಡ
ಮೈಸೂರು,ಜು.21: ''ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಬಾ ಎಂದು ಕರೆದಿಲ್ಲ, ಆದರೆ ಬಿಜೆಪಿಗೆ ಮಾತ್ರ ಹೋಗಬೇಡ ಅಂತಾ ಹೇಳಿದ್ದಾರೆ. ಜೆಡಿಎಸ್ ನಲ್ಲೇ ಇರೂ ಅಂತನೂ ಹೇಳಿಲ್ಲ, ಅವರು ಏನು ಹೇಳಿದ್ದಾರೆ ಅದನ್ನೇ ನಾನು ಈಗ ಬಹಿರಂಗವಾಗಿ ಹೇಳುತ್ತಿದ್ದೇನೆಗ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ನನ್ನ ನಿರ್ಧಾರ ಏನು ಎಂಬುದನ್ನು ಎರಡು ಮೂರು ತಿಂಗಳಲ್ಲಿ ತೀರ್ಮಾನ ಮಾಡುತ್ತೇನೆ. ಸಿದ್ದರಾಮಯ್ಯ ಕಳೆದ ಬಾರಿ ಸೋತಿರುವ ಕಾರಣ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುವ ವಿಚಾರದಲ್ಲಿ ಅವರಿಗೆ ಆತಂಕ ಇದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ. ಹೀಗಾಗಿ ಸೇಫ್ ಪ್ಲೇಸ್ ನೋಡ್ತಾ ಇದ್ದಾರೆ. ಅರ್ಜಿ ಹಾಕಿ ಗೆದ್ದು ಬರುವಂತ ಕ್ಷೇತ್ರ ಹುಡುಕುತ್ತಿದ್ದಾರೆ. ಅವರು ಚುನಾವಣೆಯಲ್ಲಿ ರಾಜ್ಯ ಪ್ರವಾಸ ಮಾಡಬೇಕಿದೆ. ಇದಕ್ಕಾಗಿ ಅಳೆದು ತೂಗಿ ಲೆಕ್ಕ ಹಾಕುತ್ತಾರೆ' ಎಂದರು.
ಒಕ್ಕಲಿಗರು ತಮ್ಮನ್ನೇ ಬೆಂಬಲಿಸಬೇಕು ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಜಿ.ಟಿ ದೇವೇಗೌಡರು, ಜನರ ಮನಸ್ಥಿತಿ ಈಗ ತೀರ್ಮಾನವಾಗುವುದಿಲ್ಲ.ಅದಕ್ಕೆ ಇನ್ನೂ ಸಮಯಬೇಕು ಎಂದರು.