×
Ad

ಪಾಲಿಸ್ಟರ್ ಧ್ವಜ ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವುದು ರಾಷ್ಟ್ರಧ್ವಜ, ಖಾದಿ ಬಟ್ಟೆಗೆ ಅಗೌರವ: ಸಿದ್ದರಾಮಯ್ಯ

Update: 2022-07-22 18:15 IST

ಬೆಂಗಳೂರು: 'ಕೇಸರಿ,ಬಿಳಿ ಹಸಿರು ಬಣ್ಣಗಳ ತ್ರಿವರ್ಣ ಧ್ವಜವನ್ನು 1947ರಲ್ಲಿ ಇದೇ ದಿನ ಸಂವಿಧಾನ ರಚನಾ ಸಭೆ ರಾಷ್ಟ್ರಧ್ವಜವಾಗಿ ಅಂಗೀಕರಿಸಿತ್ತು. ಈ ಬಣ್ಣಗಳು ಸಾರುವ ಶಾಂತಿ, ತ್ಯಾಗ, ಧೈರ್ಯ, ಸಾಮರ್ಥ್ಯ, ಭರವಸೆ ಮತ್ತು ಸರ್ವಸಮಾನ ಅಭಿವೃದ್ದಿಯ ಸಂದೇಶವನ್ನು ನಾವೆಲ್ಲರೂ ಗೌರವಿಸೋಣ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ  ಟ್ವೀಟ್ ಮಾಡಿರುವ ಅವರು, ' ರಾಷ್ಟ್ರಗೀತೆಯಷ್ಟೇ ಪವಿತ್ರವಾದ ರಾಷ್ಟ್ರಧ್ವಜ ದೇಶದ ಅಸ್ಮಿತೆ ಮತ್ತು ಸ್ವಾಭಿಮಾನದ ಸಂಕೇತ. ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿ ಪಾಲಿಸ್ಟರ್ ರಾಷ್ಟ್ರಧ್ವಜಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವುದು ರಾಷ್ಟ್ರಧ್ವಜ ಮತ್ತು ಖಾದಿ ಬಟ್ಟೆಗೆ ಮಾಡಿರುವ ಅಗೌರವವಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

'ಪಾಲಿಸ್ಟರ್ ರಾಷ್ಟ್ರಧ್ವಜಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುವ ಬಿಜೆಪಿ ಸರ್ಕಾರದ ನಿರ್ಧಾರದಿಂದಾಗಿ, ದಶಕಗಳಿಂದ ರಾಷ್ಟ್ರಧ್ವಜವನ್ನು ತಯಾರಿಸಿ ದೇಶಕ್ಕೆ ಹಂಚುತ್ತಿದ್ದ ನಮ್ಮ ಹುಬ್ಬಳ್ಳಿಯ 'ಕರ್ನಾಟಕ ಖಾದಿ ಗ್ರಾಮದ್ಯೋಗ ಸಂಯುಕ್ತ ಸಂಘ' ಬಾಗಿಲು ಹಾಕುವ ಪರಿಸ್ಥಿತಿ ಎದುರಾಗಿದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

'ಸರ್ಕಾರ ಪಾಲಿಸ್ಟರ್ ಧ್ವಜಗಳ ಬಳಕೆಯ ಆದೇಶವನ್ನು ತಕ್ಷಣ ವಾಪಸು ಪಡೆದು ಖಾದಿ ಬಟ್ಟೆಯ ರಾಷ್ಟ್ರಧ್ವಜಗಳ ತಯಾರಿಕೆಗಷ್ಟೇ ಅವಕಾಶ ನೀಡಬೇಕು. ಈ ಮೂಲಕ ರಾಷ್ಟ್ರಧ್ವಜದ ಗೌರವವನ್ನು ಎತ್ತಿಹಿಡಿಯಬೇಕು ಮತ್ತು ಖಾದಿ ಗ್ರಾಮದ್ಯೋಗದ ಅಭಿವೃದ್ದಿಗೆ ನೆರವಾಗಬೇಕು' ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News