ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ರಾಜ್ಯ ಬಿಜೆಪಿಯ ಕುಟುಂಬ ರಾಜಕಾರಣಕ್ಕೆ ಹೊಸ ಸೇರ್ಪಡೆ: ಕಾಂಗ್ರೆಸ್

Update: 2022-07-22 16:04 GMT

ಬೆಂಗಳೂರು, ಜು.22: ಅಂತೂ ಇಂತೂ ‘ಸಂತೋಷ ಕೂಟ'ದ ‘ಬಿಎಸ್‍ವೈ ಮುಕ್ತ ಬಿಜೆಪಿ’ ಅಭಿಯಾನ ಕೊನೆಯ ಹಂತಕ್ಕೆ ಬಂದಿದೆ. ಬಿ.ಎಸ್.ಯಡಿಯೂರಪ್ಪ ಅವರು ಪುತ್ರನಿಗೆ ಕ್ಷೇತ್ರ ಬಿಟ್ಟುಕೊಡುವ ಮಾತನಾಡುವ ಮೂಲಕ ಅಧಿಕಾರದಿಂದ ಇಳಿಯುವಾಗ ಅವರು ಹಾಕಿದ ಕಣ್ಣೀರಿನ ನೈಜ ಅರ್ಥ ಬಯಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಕಾಂಗ್ರೆಸ್, ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ರಾಜ್ಯ ಬಿಜೆಪಿಯ ಪ್ರಯತ್ನ ಎದುರಿಸಲಾರದೆ ಅಸಹಾಯಕರಾಗಿ ಹಿಂದೆ ಸರಿದಿದ್ದಾರೆ ಎಂದು ಹೇಳಿದೆ.

ಕಾಂಗ್ರೆಸ್‍ನತ್ತ ಕುಟುಂಬ ರಾಜಕಾರಣದ ಗೂಬೆ ಕೂರಿಸುವ ಬಿಜೆಪಿಗೆ ಶಿಕಾರಿಪುರದಲ್ಲಿ ಸ್ಪರ್ಧಿಸಲು ಸಾಮಾನ್ಯ ಕಾರ್ಯಕರ್ತರು ಸಿಗಲಿಲ್ಲವೇ? ಬಿ.ವೈ.ವಿಜಯೇಂದ್ರ ಅವರು ಸ್ಪರ್ಧಿಸುವುದು ರಾಜ್ಯ ಬಿಜೆಪಿಯ ಕುಟುಂಬ ರಾಜಕಾರಣಕ್ಕೆ ಹೊಸ ಸೇರ್ಪಡೆ. ದೇಶದುದ್ದಕ್ಕೂ ಕುಟುಂಬ ರಾಜಕಾರಣದ ಬೀಜ ಬಿತ್ತಿದ ಬಿಜೆಪಿ ಇತರ ಪಕ್ಷಗಳತ್ತ ಬೆರಳು ತೋರುವುದು ಪರಮ ಹಾಸ್ಯ ಎಂದು ಕಾಂಗ್ರೆಸ್ ಟೀಕಿಸಿದೆ.

ವರುಣಾದಿಂದ ಬಿ.ವೈ.ವಿಜಯೇಂದ್ರ ಸ್ಪರ್ಧೆಯನ್ನು ತಡೆಯಲಾಗಿತ್ತು. ಮಸ್ಕಿ, ಹಾನಗಲ್‍ನಲ್ಲಿ ಸ್ಪರ್ಧೆಯ ಕನಸಿಗೂ ರಾಜ್ಯ ಬಿಜೆಪಿ ತಣ್ಣೀರು ಸುರಿದಿತ್ತು. ವಿಧಾನಪರಿಷತ್ ಸ್ಪರ್ಧೆಗೂ ಬ್ರೇಕ್ ಹಾಕಲಾಗಿತ್ತು. ಮಂತ್ರಿಗಿರಿಯನ್ನೂ ವಂಚಿಸಲಾಯ್ತು. ಬಿಜೆಪಿಯ ‘ಬಿಎಸ್‍ವೈ ಮುಕ್ತ ಬಿಜೆಪಿ’ ಕಸರತ್ತುಗಳಿಗೆ ಮಣಿದು ಯಡಿಯೂರಪ್ಪ ಅವರೇ ಪುತ್ರನಿಗೆ ಕ್ಷೇತ್ರ ಬಿಡುವಂತಾಯಿತು ಎಂದು ಕಾಂಗ್ರೆಸ್ ಹೇಳಿದೆ.

ಕೇಂದ್ರ ಸರಕಾರ ಹೊಸ ಧ್ವಜ ನೀತಿ ಹೊರಡಿಸಿ ‘ಸ್ವದೇಶಿ' ಪರಿಕಲ್ಪನೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದೆ. ಲೋಕಲ್ ಫಾರ್ ವೋಕಲ್ ಎಂದವರು ಸಂಪೂರ್ಣ ಖಾದಿ ಉದ್ಯಮವನ್ನೆ ಮುಳುಗಿಸಲು ಹೊರಟಿದ್ದಾರೆ. ರಾಷ್ಟ್ರ ಧ್ವಜದ ವಿಷಯದಲ್ಲಿ ಬಿಜೆಪಿ ಸರಕಾರದ ನಡೆ ಖಂಡನೀಯ. ಖಾದಿ ಉದ್ಯಮ ಮತ್ತು ಕಾರ್ಮಿಕರ ಪರವಾಗಿ ಕಾಗ್ರೆಸ್ ಪಕ್ಷ ನಿಲ್ಲಲಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News