×
Ad

ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಿಬ್ಬಂದಿ ನೇಮಕಾತಿಗೆ ಒಪ್ಪಿಗೆ

Update: 2022-07-22 23:21 IST

ಬೆಂಗಳೂರು, ಜು. 22: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 700 ಮಂದಿ ಕಚೇರಿ ಸಹಾಯಕರು ಹಾಗೂ 300ಕ್ಕೂ ಹೆಚ್ಚು ಮಂದಿ ಶೈಕ್ಷಣಿಕ ಸಹಾಯಕರು ಸೇರಿದಂತೆ ಒಟ್ಟು 1052 ಹುದ್ದೆಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಸಂಪುಟ ಸಭೆ ಅನುಮೋದನೆ ನೀಡಿದೆ.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಜರುಗಿದ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ‘ಜಲಜೀವನ್ ಮಿಷನ್ ಯೋಜನೆಯಡಿ' ರಾಜ್ಯದ ವಿವಿಧ ಜಿಲ್ಲೆಗಳ ಜನವಸತಿ ಪ್ರದೇಶಗಳಿಗೆ ಒಟ್ಟು 1,810 ಕೋಟಿ ರೂ.ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿಯಿಂದ ನೀರನ್ನು ಎತ್ತಿ ಹುಕ್ಕೇರಿ ತಾಲ್ಲೂಕಿನ 19 ಕೆರೆಗಳಿಗೆ ಒದಗಿಸುವ ಕಾಮಗಾರಿಯನ್ನು 42.50 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆ ನೀಡಿದೆ. ಬಾಗಲಕೋಟೆ ತಾಲೂಕಿನ ಮುಚಖಂಡಿ ಕೆರೆಗೆ ಘಟಪ್ರಭಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸುವ ಯೋಜನೆಯ 2ನೇ ಹಂತದ ಕಾಮಗಾರಿಯನ್ನು 49 ಕೋಟಿ ರೂ.ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಒಪ್ಪಿಗೆ ನೀಡಿದೆ ಎಂದರು.

ಪ್ರತಿಕ್ರಿಯಿಸಲು ನಾವು ಯಾರು?: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ ಬಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಬಗ್ಗೆ ಪ್ರತಿಕ್ರಿಯಿಸಲು ನಾವು ಯಾರು? ಅವರು ಈ ಕುರಿತು ಘೋಷಣೆ ಮಾಡಿದ್ದಾರೆ. ಆದರೆ, ಈ ಬಗ್ಗೆ ಪಕ್ಷ ಏನೂ ಹೇಳಿಲ್ಲ. ಅವರಿಗೆ ವಯಸ್ಸಾಗಿದೆ ಎಂದು ಅವರು ಅಂದುಕೊಂಡಿರಬಹುದೆ ಹೊರತು ನಾವು ಆ ಬಗ್ಗೆ ಹೇಳಲ್ಲ. ಈ ಬಗ್ಗೆ ಪಕ್ಷ ಏನಾದರೂ ಹೇಳಿದ್ದರೆ ನಾವು ಆಕ್ಷೇಪಿಸಬಹುದಿತ್ತು. ವಿಪಕ್ಷ ನಾಯಕ ಸಿದ್ದರಾಮಯ್ಯ ‘ಇದೇ ನನ್ನ ಕೊನೆಯ ಚುನಾವಣೆ' ಎಂದು ಹಲವು ಬಾರಿ ಹೇಳಿದ್ದಾರೆ. ಹೀಗಾಗಿ ಬಿಎಸ್‍ವೈ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ'

-ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News