ಬಿಎಸ್ ವೈ ನಿರ್ಧಾರ: ವಿವಿಧ ಪಕ್ಷಗಳ ಮುಖಂಡರು ಹೇಳಿದ್ದೇನು?

Update: 2022-07-23 07:49 GMT

ಬೆಂಗಳೂರು: 'ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ'  ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.  

ಶುಕ್ರವಾರ ಶಿಕಾರಿಪುರದ ಅಂಜಾನಪುರ ಡ್ಯಾಂಗೆ ಬಾಗಿನ ಸಲ್ಲಿಸಿ‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಪುತ್ರ ಬಿ.ವೈ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. 

ಈ ಕುರಿತು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಪ್ರತಿಕ್ರಿಯಿಸಿದ್ದು,  ‘ಬಿ.ಎಸ್. ಯಡಿಯೂರಪ್ಪ ಅವರು ನಿವೃತ್ತಿ ಘೋಷಿಸಬಾರದು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. 


ಮುಂದಿನ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಬಲ ಮಾರ್ಗದರ್ಶನ ಇರಲಿದೆ.  ಅವರಿಗೆ ಸುಸ್ತಾಗಲಿ ನಿವೃತ್ತಿಯಾಗಲಿ ಇಲ್ಲ. ಅವರು ನಿರಂತರ ಹೋರಾಟಗಾರರು. ಅವರು ಬಿಜೆಪಿಯೊಂದಿಗೆ ಸದಾ ಇದ್ದಾರೆ. ಅವರಿಗೆ ತಮ್ಮದೇ ಆದ ಮಹತ್ವವಿದ್ದು, ಪಕ್ಷದ ವರಿಷ್ಠರಿಗೂ ಅವರ ಮಹತ್ವದ ಅರಿವಿದೆ. ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು.

- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ 

----------------------------------------------

‘ಬಿ.ಎಸ್. ಯಡಿಯೂರಪ್ಪ ಅವರು ನಿವೃತ್ತಿ ಘೋಷಿಸಬಾರದು. ಇನ್ನೂ ಅವರಿಗೆ ರಾಜಕೀಯ ಶಕ್ತಿ ಇದೆ, ಆದರೂ ಕೂಡ ಅವರನ್ನು ಅಧಿಕಾರದಿಂದ ಇಳಿಸಿದರು. ಅವರ ನಾಯಕತ್ವದಲ್ಲೇ ನೂರಾರು ಸೀಟು ಬಂದಿತ್ತು. ಬೇರೆ ಯಾವುದೇ ನಾಯಕನ ಹೆಸರಿನಲ್ಲಿ ಸೀಟು ಬಂದಿಲ್ಲ’ಅವರು ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ‌‌ ಇಟ್ಟು ಕೆಲಸ ಮಾಡಿದ್ದಾರೆ. ಅವರು ಅನುಭವಿಸುತ್ತಿರುವ ನೋವು ಮತ್ತು ಕಿರುಕುಳ ಅವರಿಗೇ ಗೊತ್ತು. ಬಿಜೆಪಿಯವರು ಅವರನ್ನು ಎಷ್ಟು ಬಳಸಿಕೊಳ್ಳಬೇಕೋ ಅಷ್ಟು ಬಳಸಿಕೊಂಡಿದ್ದಾರೆ. ಅವರ ಮಗನನ್ನು ತನ್ನ ಉತ್ತರಾಧಿಕಾರಿ ಅಂತ ಹೇಳಿರುವ ಬಗ್ಗೆ ನನಗೆ ಏನೂ ಅಭ್ಯಂತರ ಇಲ್ಲ. ಅದು ಅವರ ವೈಯಕ್ತಿಕ ವಿಚಾರ'

-  ಡಿ.ಕೆ ಶಿವಕುಮಾರ್, ಕೆ.ಪಿಸಿಸಿ ಅಧ್ಯಕ್ಷ 

---------------------------------------

ಯಡಿಯೂರಪ್ಪ ಅವರು ತಮ್ಮ ಪುತ್ರ ರಾಜ್ಯದ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಬಿಜೆಪಿ ಕಾರ್ಯರ್ತರಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ವಿಜಯೇಂದ್ರರನ್ನು ಶಿಕಾರಿಪುರದಲ್ಲಿ ಕಣಕ್ಕಿಳಿಸುವ ಮೂಲಕ ಈ ನಿರ್ಧಾರ ಕೈಗೊಂಡಿದ್ದಾರೆ. 

- ಎಚ್.ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ 

---------------------------------------

‘ಯಡಿಯೂರಪ್ಪ ಅವರ ಇತಿಹಾಸ ಕೇಳಿದರೆ ರೋಮಾಂಚನವಾಗುತ್ತದೆ. ಎಲ್ಲೋ ಇದ್ದ ನನ್ನನ್ನು ಗುರುತಿಸಿ ರಾಜಕೀಯಕ್ಕೆ ಕರೆತಂದರು. ಅವರಿಲ್ಲದ ರಾಜ್ಯ ರಾಜಕಾರಣ ನೋಡಲು ಕಷ್ಟವಾಗುತ್ತದೆ’

- ಎಂಪಿ ರೇಣುಕಾಚಾರ್ಯ, ಬಿಜೆಪಿ ಶಾಸಕ 

-----------------

ದಕ್ಷಿಣ ಭಾರತದಲ್ಲಿ ಬಜೆಪಿಯನ್ನು ಬೇರುಮಟ್ಟದಿಂದ ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನ ಅಗತ್ಯ.ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದರೆ ಯಡಿಯೂರಪ್ಪ ಅವರ ಸಲಹೆ ಹಾಗೂ ಮಾರ್ಗದರ್ಶನ ಅತ್ಯಗತ್ಯ 

ಮುರುಗೇಶ್ ನಿರಾಣಿ - ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ 

--------------------------------

ಯಡಿಯೂರಪ್ಪ ಅನುಭವ ರಾಜ್ಯಕ್ಕೆ ಅವಶ್ಯಕತೆ ಇದೆ. ಪ್ರಧಾನಿ ಮೋದಿ ಒಂದು ಮಾತು ಹೇಳಿದ್ದರು, ವಂಶಪಾರಂಪರ್ಯ ರಾಜಕೀಯ ಸಲ್ಲ ಅಂತ. ಮೋದಿ‌ ಮಾತು ಯಾಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ?. ಯಡಿಯೂರಪ್ಪ ಬಿ.ವೈ. ರಾಘವೇಂದ್ರ ಈಗಾಗಲೇ ರಾಜಕೀಯದಲ್ಲಿ ಇದ್ದಾರೆ. ಈಗ ಶಿಕಾರಿಪುರಕ್ಕೆ ಬೇರೆಯವರಿಗೆ ಅವಕಾಶ ಕೊಡ್ಬೇಕಿತ್ತು. ಸಾಮಾನ್ಯ ಕಾರ್ಯಕರ್ತರಿಗೆ ಕ್ಷೇತ್ರ ಬಿಟ್ಟು ಕೊಡಲಿ. ಯಡಿಯೂರಪ್ಪ ಬಹಳ ಹಿರಿಯರು ನಿಮಗೋಸ್ಕರ ದುಡಿದ ಕಾರ್ಯಕರ್ತರು ಇದ್ದಾರೆ, ಅವರಿಗೆ ಅವಕಾಶ ಮಾಡಿ ಕೊಡಲಿ. 

-ಎಚ್. ವಿಶ್ವನಾಥ್, ಬಿಜೆಪಿ ಎಂಲ್ಸಿ

-------------------------------------

ಬಿಎಸ್‌ವೈ ಯಾಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ . ಅವರು ಇಂಥ ನಿರ್ಧಾರ ಕೈಗೊಳ್ಳಬಾರದು. ಅವರು ಇನ್ನು ಸಕ್ರೀಯ ರಾಜಕಾರಣದಲ್ಲಿ ಇರಬೇಕು. ಅವರಿಗೆ ರಾಜಕೀಯದಲ್ಲಿ ಅನುಭವ ಇದೆ

- ಎಚ್ .ಡಿ ರೇವಣ್ಣ, ಜಡಿಎಸ್ ನಾಯಕರು.

-----------------------------------------

ಮೋದಿಯವರು ಪ್ರಧಾನ ಮಂತ್ರಿಯಾದ ಮೇಲೆ 75 ವರ್ಷ ನಂತರ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದು ಪರಿಪಾಠವಾಗಿದೆ. ಈ ಹಿನ್ನೆಲೆಯಲ್ಲೇ ಬಿ.ಎಸ್ ಯಡಿಯೂರಪ್ಪನವರು ಈ ನಿರ್ಧಾರ ಕೈಗೊಂಡಿದ್ದಾರೆ. 

- ಬಸನಗೌಡ ಪಾಟೀಲ್ ಯತ್ನಾಳ್ 

----------------------------------------

'ಅಂತೂ ಇಂತೂ ‘ಸಂತೋಷ ಕೂಟ'ದ ‘ಬಿಎಸ್‍ವೈ ಮುಕ್ತ ಬಿಜೆಪಿ’ ಅಭಿಯಾನ ಕೊನೆಯ ಹಂತಕ್ಕೆ ಬಂದಿದೆ. ಬಿ.ಎಸ್.ಯಡಿಯೂರಪ್ಪ ಅವರು ಪುತ್ರನಿಗೆ ಕ್ಷೇತ್ರ ಬಿಟ್ಟುಕೊಡುವ ಮಾತನಾಡುವ ಮೂಲಕ ಅಧಿಕಾರದಿಂದ ಇಳಿಯುವಾಗ ಅವರು ಹಾಕಿದ ಕಣ್ಣೀರಿನ ನೈಜ ಅರ್ಥ ಬಯಲಾಗಿದೆ. ಬಿ.ವೈ.ವಿಜಯೇಂದ್ರ ಅವರು ಸ್ಪರ್ಧಿಸುವುದು ರಾಜ್ಯ ಬಿಜೆಪಿಯ ಕುಟುಂಬ ರಾಜಕಾರಣಕ್ಕೆ ಹೊಸ ಸೇರ್ಪಡೆ. ದೇಶದುದ್ದಕ್ಕೂ ಕುಟುಂಬ ರಾಜಕಾರಣದ ಬೀಜ ಬಿತ್ತಿದ ಬಿಜೆಪಿ ಇತರ ಪಕ್ಷಗಳತ್ತ ಬೆರಳು ತೋರುವುದು ಪರಮ ಹಾಸ್ಯ'.

-ಕಾಂಗ್ರೆಸ್ ಟ್ವೀಟ್

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News