ವಕೀಲರಿಗೆ ವಿಮೆ ಯೋಜನೆ: ಮೂಲನಿಧಿ ಸ್ಥಾಪಿಸಲು ರಾಜ್ಯ ಸರಕಾರ ಒಪ್ಪಿಗೆ

Update: 2022-07-23 14:23 GMT

ಬೆಂಗಳೂರು, ಜು.23: ಹೊಸದಿಲ್ಲಿ ಮಾದರಿಯಲ್ಲೇ ರಾಜ್ಯದಲ್ಲೂ ವಕೀಲರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಅನುವಾಗುವಂತೆ 100 ಕೋಟಿ ರೂ. ಮೂಲನಿಧಿ ಸ್ಥಾಪಿಸಲು ರಾಜ್ಯ ಸರಕಾರದ ವತಿಯಿಂದ ನೆರವು ನೀಡುವ ಯೋಜನೆಗೆ ಇತ್ತೀಚೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. 

ಸಚಿವ ಸಂಪುಟದ ಅನುಮೋದನೆ ಪಡೆಯುವ ಷರತ್ತಿಗೆ ಒಳಪಟ್ಟು ಯೋಜನೆ ಜಾರಿಗೊಳಿಸಲು ಸರಕಾರವು ತಾತ್ವಿಕ ಅನುಮೋದನೆ ನೀಡಿದೆ ಎಂದು ಕಾನೂನು ಇಲಾಖೆಯ ಆಡಳಿತ ವಿಭಾಗದ ಅಧೀನ ಕಾರ್ಯದರ್ಶಿ ಆದಿನಾರಾಯಣ ಸಹಿ ಮಾಡಿರುವ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಸಕ್ತ ವರ್ಷದ ಬಜೆಟ್‍ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ವಕೀಲರಿಗೆ ಆರೋಗ್ಯ ಸೌಲಭ್ಯಕ್ಕಾಗಿ ಮೂಲನಿಧಿ ಸ್ಥಾಪಿಸಲು ನೆರವು ನೀಡಲಾಗುವುದು ಎಂದು ಘೋಷಿಸಿದ್ದರು. ಇದಕ್ಕಾಗಿ ಸರಕಾರವು ಶೇ.50ರಷ್ಟು ಮೊತ್ತ ನೀಡಲಿದೆ. ಉಳಿದ ಮೊತ್ತವನ್ನು ವಕೀಲರುಗಳ ಕೊಡುಗೆಯಿಂದ ಸಂಗ್ರಹಿಸಿ, ರಾಜ್ಯ ವಕೀಲರ ಪರಿಷತ್ (ಕೆಎಸ್‍ಬಿಸಿ) ಸದರಿ ನಿಧಿಯನ್ನು ನಿರ್ವಹಿಸಲು ನಿಯಮ ರಚಿಸಬೇಕು ಎಂದು ಹೇಳಿ ಹಣಕಾಸು ಇಲಾಖೆಯು ಜೂನ್‍ನಲ್ಲಿ ಹೇಳಿಕೆ ಪ್ರಕಟಿಸಿತ್ತು.

ಕರ್ನಾಟಕದ ವಕೀಲರಿಗೆ ಆರೋಗ್ಯ ಆರೋಗ್ಯ ಸೌಲಭ್ಯ ಕಲ್ಪಿಸಲು ಮೂಲನಿಧಿ ಸ್ಥಾಪಿಸಲಾಗುವುದು ಎಂದು ಈಗಾಗಲೇ ರಾಜ್ಯ ಸರಕಾರವು ಬಜೆಟ್‍ನಲ್ಲಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಸದರಿ ಯೋಜನೆಯನ್ನು ಜಾರಿಗೊಳಿಸುವುದಕ್ಕಾಗಿ 18 ರಿಂದ 85 ವರ್ಷದ ಒಳಗಿನ ವಕೀಲರ ವಯೋಸಮೂಹ ಪಟ್ಟಿ(ಏಜ್‍ಬ್ಯಾಂಡ್) ಸಲ್ಲಿಸುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್(ಕೆಎಸ್‍ಬಿಸಿ)ಗೆ ಕಾನೂನು ಇಲಾಖೆ ಅಧೀನ ಕಾರ್ಯದರ್ಶಿ ಇತ್ತೀಚೆಗೆ ನಿರ್ದೆಶನ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News