ಸಂವಿಧಾನದ ಉಳಿವಿಗೆ ಪ್ರತಿಯೊಬ್ಬರೂ ಬೀದಿಗಿಳಿಯಬೇಕು: ಮಾವಳ್ಳಿ ಶಂಕರ್

Update: 2022-07-23 16:13 GMT

ದಾವಣಗೆರೆ : 'ಪ್ರಸ್ತುತ ಭಾರತದಲ್ಲಿ ಎರಡು ಸಂಸ್ಕ್ರತಿಯಿದೆ. ಒಂದು ಬಿಪಿಎಲ್ ಭಾರತ ಇನ್ನೊಂದು ಐಪಿಎಲ್ ಭಾರತ. ಅದರೆ. ಇಲ್ಲಿ ಬಿಪಿಎಲ್ ಭಾರತವನ್ನು ವ್ಯವಸ್ಥಿತವಾಗಿ ತುಳಿದು ಹಾಕುವ ಯತ್ನ ನಡೆಯುತ್ತಿದೆ' ಎಂದು ದಲಿತ ಪರ ಹೋರಾಟಗಾರ ಮಾವಳ್ಳಿ ಶಂಕರ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಿರುವ ರಾಜ್ಯಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

ಪ್ರಸ್ತುತ ದೇಶದ ಉನ್ನತ ಹುದ್ದೆಗೆ ಅದಿವಾಸಿ ಮಹಿಳೆ ಆಯ್ಕೆಯಾಗಿರುವುದು ಬಹಳ ಸಂತೋಷದ ವಿಚಾರ ಅದರೆ, ಅವರು ಯಾವುದೇ ಸ್ವಂತ ನಿರ್ಧಾರ ಕೈಗೊಳ್ಳಲು ಸಾಧ್ಯವೇ. ಹುದ್ದೆ ಮಾತ್ರ ಅವರು ಅದರೆ, ಅದರ ಹಿಂದೆ ಬೇರೆಯವರೆ ಇದ್ದಾರೆ. ಈ ಹಿಂದೆ ಇದ್ದ ರಾಷ್ಟ್ರಪತಿ ಅವರು ಮೇಲುವರ್ಗದ ಜನರಿಗೆ ಚರ್ಚಿಸದೆ ಶೇ 10 ರಷ್ಟು ಮೀಸಲಾತಿ ಒದಗಿಸಿದರು.ಅದರೆ, ಈ ರೀತಿ ಸ್ವಂತಕ್ಕೆ ಇಲ್ಲದವರು ಉನ್ನತ ಹುದ್ದೆಯಲ್ಲಿ ಕುಳಿತರೆ ಮುಂದಿನ ದಿನಗಳಲ್ಲಿ ಹಿಂದೂ ರಾಷ್ಟ್ರಕ್ಕೆ ಸಹಿ ಹಾಕುವ ಅಪಾಯವು ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಂದಿನ 2024 ರ ಚುನಾವಣೆ ಬಹಳ ಮಹತ್ವದ್ದಾಗಿದೆ. ಮಾಡು ಇಲ್ಲವೇ ಮಡಿ ಸ್ಥಿತಿಗೆ ಬಂದಿದ್ದೇವೆ. ದೇಶದ ಸಂವಿಧಾನದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಅದ್ದರಿಂದ ಜನಪರ ಚಿಂತಕರು ಬೀದಿಗೆ ಇಳಿಯಬೇಕು. ಇಲ್ಲದಿದ್ದರೆ ಕನಸಿನ ಭಾರತ ಸಾಧ್ಯವಿಲ್ಲ. ಚಿಂತಕರು. ವಿದ್ಯಾರ್ಥಿಗಳು,  ಶಿಕ್ಷಕರು ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕು ಇದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಕರೆಕೊಟ್ಟರು.

ಇವತ್ತು ಸರಕಾರದ ವಿರುದ್ದ ಮಾತನಾಡುವವರಿಗೆ ಲವ್ ಲೆಟರ್ ಬರುತ್ತಿವೆ. ಇಂತಹವುಗಳಿಗೆ ಎದುರುವುದಿಲ್ಲ. ತಾಕತ್ತು ಇದ್ದರೆ ಎದುರಿಗೆ ಬನ್ನಿ. ಎದುರಿಸಲು ಸಿದ್ದರಿದ್ದೇವೆ. ಗೊಡ್ಡು ಬೆದರಿಕೆಗೆ ಎದುರುವುದಿಲ್ಲ ಎಂದ ಅವರು, ಸಾಹಿತ್ಯ ದೇಶ ಉಳಿವಿಗಾಗಿ ಇದೆ ಎನ್ನುವುದನ್ನು ಮರೆಯಬಾರದು.  ಬಂಡಾಯ ಸಾಹಿತ್ಯ ಜನಪರ ದುಡಿಯುವರಿಗಾಗಿ ಇದೆ ಎಂದರು.

ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಮಾತನಾಡಿ, ಪ್ರಸ್ತುತ ಸಂವಿಧಾನದ ಆಶಯಗಳನ್ನು ತಿರುಚುವ ಪ್ರಯತ್ನಗಳು ನಡೆಯುತ್ತಿವೆ. ಅಲ್ಲದೇ ಸರಕಾರಗಳು ಸದನಗಳಲ್ಲಿ ಚರ್ಚೆ ಮಾಡದೆ ಮಸೂದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ತರುವ ಕೆಲಸ ಸಂವಿಧಾನಕ್ಕೆ ವಿರುದ್ದವಾಗಿದೆ. ಆರ್ಥಿಕ ದ್ರೋಹಗಳು ನಡೆಯುತ್ತಿವೆ. ಮಹಾರಾಷ್ಟ್ರದಲ್ಲಿ ನಡೆದ ಸರಕಾರ ಉರುಳಿಸುವ ಕೆಲಸದಲ್ಲಿ ಸುಮಾರು 2 ಸಾವಿರ ಕೋಟಿ ಖರ್ಚು ಮಾಡಲಾಗಿದೆ ಎನ್ನುವ ಚರ್ಚೆಗಳು ನಡೆಯುತ್ತಿವೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News