ಚಿಕ್ಕಮಗಳೂರು: 'ಸಿದ್ದರಾಮಯ್ಯ ಅಮೃತ ಮಹೋತ್ಸವ' ಕಾರ್ಯಕ್ರಮಕ್ಕೆ ವಿವಿಧ ಸಂಘಟನೆಗಳಿಂದ ಬೆಂಬಲ

Update: 2022-07-23 16:19 GMT

ಚಿಕ್ಕಮಗಳೂರು, ಜು.23: ಸಮಾಜ ಮುಖಿ ವ್ಯಕ್ತಿತ್ವ, ಜನಪರ ಕಾಳಜಿ ಹೊಂದಿರುವ ಮಾಜಿ ಮುಖ್ಯ ಮಂತ್ರಿ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೆಯ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಬೆಂಬಲ ನೀಡುವುದರೊಂದಿಗೆ ಪಕ್ಷಾತೀತವಾಗಿ ಭಾಗವಹಿಸುವುದಾಗಿ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು ಹೇಳಿದ್ದಾರೆ. 

ಜಿಲ್ಲಾ ಅಹಿಂದ ಒಕ್ಕೂಟ ನಗರದ ಕನಕ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ 75ನೆಯ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯಲ್ಲಿ ಮುಖಂಡರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಬಿಎಸ್ಪಿ ಅಧ್ಯಕ್ಷ ಕೆ.ಟಿ.ರಾಧಕೃಷ್ಣ ಮತ್ತು ಪ್ರಧಾನ ಕಾರ್ಯದರ್ಶಿ ಪರಮೇಶ್ ಮಾತನಾಡಿ, ಸಿದ್ಧರಾಮಯ್ಯ ಅವರು ಜಾತ್ಯತೀತ ವ್ಯಕ್ತತ್ವದ ಜನಪರವಾದ ಕಾಳಜಿ ಹೊಂದಿದ್ದಾರೆ. ಅವರು ಎಲ್ಲಾ ವರ್ಗದ ಜನ ಆಸ್ತಿ. ಅವರ ಹುಟ್ಟು ಹಬ್ಬದ ಅಂಗವಾಗಿ ದಾವಣಗೆರೆಯಲ್ಲಿ ಆಯೋಜಿಸಿರುವ ಅಮೃತ ಮಹೋತ್ಸವದಲ್ಲಿ ಪಕ್ಷ ಬದಿಗಿಟ್ಟು ಭಾಗವಹಿಸುವುದಾಗಿ ಹೇಳಿದರು.

ಅರಸು ಸಮಾಜದ ಮುಖಂಡ ತೇಗೂರು ಜಗದೀಶ್ ಮಾತನಾಡಿ, ಮಾಜಿ ಮುಖ್ಯ ಮಂತ್ರಿ ಮತ್ತು ಹಿಂದುಳಿದ ವರ್ಗದ ಅಭಿವೃದ್ಧಿ ಹರಿಕಾರರಾಗಿದ್ದ ದಿವಂಗತ ದೇವರಾಜ ಅರಸು ಅವರ ನಂತರ ಹಿಂದುಳಿದ, ದಲಿತರ, ಶೋಷಿತರ, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡಿರುವ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸುವ ಮೂಲಕ ಜನಪರ ಯೋಜನೆಗಳನ್ನು ನೀಡಿ ಜನಮಾನಸದಲ್ಲಿ ತಮ್ಮ ಹೆಸರು ಹಸಿರಾಗಿರುವಂತೆ ಮಾಡಿದ್ದಾರೆ. ಅವರ ಹುಟ್ಟು ಹಬ್ಬದ 75 ವರ್ಷದ ಅಮೃತ ಮಹೋತ್ಸವಕ್ಕೆ ಎಲ್ಲರೂ ಬೆಂಬಲ ನೀಡುವುದರೊಂದಿಗೆ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಮುಸ್ಲಿಂ ಸಮಾಜದ ಮುಖಂಡ ಸೈಯಾದ್ ಹನೀಫ್, ಕೆ.ಮೊಹಮದ್, ಸಿ.ಎನ್.ಅಕ್ಮಲ್ ಮಾತನಾಡಿ, ಸಿದ್ಧರಾಮಯ್ಯ ಅವರು ಈ ರಾಜ್ಯದ ಜನ ಸಮುದಾಯಕ್ಕೆ ನೀಡಿರುವ ಕಾರ್ಯಕ್ರಮಗಳನ್ನು ಯಾರೂ ಮರೆಯುವಂತಿಲ್ಲ. ಅವರು ಜಾರಿಗೆ ತಂದ ಕಾರ್ಯಕ್ರಮಗಳನ್ನು ಮೆಲಕು ಹಾಕಲು ಆಯೋಜಿಸಿರುವ ಅಮೃತ ಮಹೋತ್ಸವಕ್ಕೆ ಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.

ವೀರಶೈವ ಸಮಾಜದ ಮುಖಂಡರಾದ ವಿಜಯಕುಮಾರ್, ಉಮೇಶ್, ಪಿಗ್ಮಿ ರಾಜಣ್ಣ ಮಾತನಾಡಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳನ್ನು ಪ್ರಶಂಸಿಸಿ ಅಮೃತ ಮಹೋತ್ಸವದಲ್ಲಿ ಭಾಗವಹಿಸುವುದಾಗಿ ಹೇಳಿದರು. 

ವಿಧಾನ ಪರಿಷತ್ ಮಾಜಿ ಶಾಸಕಿ ಎ.ವಿ.ಗಾಯತ್ರಿ ಶಾಂತೇಗೌಡ, ಜಿಲ್ಲಾ ಅಹಿಂದ ಒಕ್ಕೂಟ ಅಧ್ಯಕ್ಷ ಕೆ.ಎಸ್.ಶಾಂತೇಗೌಡ, ಜಿಲ್ಲಾ ಕುರುಬರ ಸಂಘ ಅಧ್ಯಕ್ಷ ಕೆ.ಎಂ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎ.ಎನ್.ಮಹೇಶ್, ರೇಖಾ ಹುಲಿಯಪ್ಪಗೌಡ, ನಗರಸಭೆ ಮಾಜಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ, ಜಿಪಂ ಸದಸ್ಯರಾದ ಕೆ.ವಿ.ಮಂಜುನಾಥ್, ಹೇಮಾವತಿ, ಕ್ರೈಸ್ತ ಸಮುದಾಯ ಮುಖಂಡರಾದ ಜಾರ್ಜ್, ಜೇಮ್ಸ್ ಡಿಸೋಜ, ಮಡಿವಾಳ ಸಮಾಜ ಮುಖಂಡ ರಾಮಚಂದ್ರ, ನಗರಸಭೆ ಸದಸ್ಯರಾದ ಶಾದಾಬ್, ಮುನೀರ್, ಅಖಿಲ ಕರ್ನಾಟಕ ಅಹಿಂದ ಒಕ್ಕೂಟ ಅಧ್ಯಕ್ಷ ರಾಮಚಂದ್ರಪ್ಪ, ಮುಖಂಡ ಕೃಷ್ಣಮೂರ್ತಿ, ಸೃದೀಪ್, ಗ್ರಾಮ ಪಂಚಾಯಿತಿ ಸದಸ್ಯ ಎಚ್.ಪಿ.ಮಂಜೇಗೌಡ, ವಿರೂಪಾಕ್ಷ ಮಾತನಾಡಿದರು.

ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿಸಲು ವಿವಿಧ ಸಮಾಜದ, ಸಂಘಟನೆಗಳ ಅನೇಕ ಮುಖಂಡರು ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News