×
Ad

ದೇಶ ಘಾತುಕ ಶಕ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿದೆ: ಚಿಂತಕ ಜಿ.ರಾಮಕೃಷ್ಣ ಆತಂಕ

Update: 2022-07-23 22:45 IST

ದಾವಣಗೆರೆ : ನಮ್ಮ ದೇಶವನ್ನು ಕೋಮುವಾದಿಗಳು ಮರುಭೂಮಿಯನ್ನಾಗಿ ಮಾಡುತ್ತಿದ್ದಾರೆ ಎಂದು ಚಿಂತಕ ಜಿ.ರಾಮಕೃಷ್ಣ ಹೇಳಿದ್ದಾರೆ.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ದೇಶ ಘಾತುಕ ಶಕ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿದೆ. ಬಡ ಜನರ ಬದುಕು ಬರ್ಬರವಾಗಿದೆ. ಸಂವಿಧಾನ, ಬಡ ಜನರು ಬದುಕು ರಕ್ಷಿಸಬೇಕಾದರೆ ಪ್ರಜೆಗಳು ಬದಲಾವಣೆಯ ಹರಿಕಾರರಾಗಬೇಕು ಎಂದು ಸಲಹೆ ನೀಡಿದರು.

ಪಠ್ಯ ಪರಿಷ್ಕರಣೆಯಲ್ಲಿ ಏಕೆ ಮೀಸಲಾತಿ ಕೇಳಿಲ್ಲ? ರಾಜ್ಯದ ಪಠ್ಯ ಪರಿಷ್ಕ್ರರಣೆ ಸಮಿತಿಯಲ್ಲಿ ದಲಿತರಿಗೆ ಅವಕಾಶವೇ ಸಿಕ್ಕಿಲ್ಲ. ಇದರ ಬಗ್ಗೆ ದಲಿತ ನಾಯಕರು ಏಕೆ ಧ್ವನಿ ಎತ್ತಿ ಮೀಸಲಾತಿ ಕೇಳಲಿಲ್ಲ. ಇಲ್ಲಿಯೂ ಮೀಸಲಾತಿ ಏಕೆ ಕೇಳಲಿಲ್ಲ. ದಲಿತ ಜನಾಂಗದವರು ಎಲ್ಲಿ ಹೋದರು ಎಂದು ಪ್ರಶ್ನಿಸಿದರು.  

ಪ್ರಸ್ತುತ ಶಿಕ್ಷಣವನ್ನು ತುಳಿದು ಚರಂಡಿಗೆ ಹಾಕಿ ಸಂಭ್ರಮಿಸುತ್ತಿದ್ದೇವೆ. ಶಿಕ್ಷಣಕ್ಕೆ ಚೈತನ್ಯ ತುಂಬ ಕೆಲಸವಾಗಬೇಕು.ಶಿಕ್ಷಣಕ್ಕೆ ಮಾರ್ಗದರ್ಶಿ ಸೂತ್ರ ಬರುತ್ತಿದೆ.ಆದರೆ, ಆ ಮಾರ್ಗಸೂಚಿ ಅವಶ್ಯಕತೆ ಇಲ್ಲ.ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ ಕುಲ ಗೋತ್ರ ಮತಧರ್ಮ ಗಮನದಲ್ಲಿಡಬಾರದು. ಆದರೆ, ದಿಕ್ಸೂಚಿ ತಯಾರು ಮಾಡಿದವರಿಗೆ ಶಿಕ್ಷಣಕ್ಕೆ ತಳಪಾಯ ಹಾಕುವ ವ್ಯವಧಾನ ಇಲ್ಲದಿರುವುದು ದುರಂತ ಎಂದರು.

ಶಿಕ್ಷಣದ ಹಾಗೂ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಡಾ.ಬರಗೂರು ರಾಮಚಂದ್ರಪ್ಪ ಬಗ್ಗೆ ಎರಡು ಉಪನ್ಯಾಸ ನೀಡಿದ್ದಾರೆ. ಆದರೆ, ಅದನ್ನು ಓದುವ ವ್ಯವದಾನ ಇಲ್ಲ.ಪರಿಷ್ಕರಣೆ ಮಾಡಿ ಅಳವಡಿಸಿ ಕಳಿಸುತ್ತೇವೆ ಎನ್ನುತ್ತಾರೆ.ಈ ರೀತಿಯ ನೀತಿ ಪುರಸ್ಕಾರ ಮಾಡುವುದನ್ನು ನೋಡಿದರೆ ಶಿಕ್ಷಣದ ಬಗ್ಗೆ ಇರುವ ಜ್ಞಾನ ಮಟ್ಟದ ತಿಳಿಸುತ್ತದೆ ಎಂದರು. 

ಇಂಧನಗಳ ಬೆಲೆ ಹೆಚ್ಚಾಗಿದೆ. ಶೇ 40 ರಷ್ಟು ಲಪಟಾಯಿಸುವವರು ಇದ್ದಾರೆ. ಆದರೆ, ಈ ಬಗ್ಗೆ ದನಿ ಎತ್ತಿದರೆ ಜೈಲಿಗೆ ಕಳಿಸುತ್ತಾರೆ.ಇಂತಹ ವೇಳೆ ನಮ್ಮ ಜವಾಬ್ದಾರಿ ಬಗ್ಗೆ ಬಂಡಾಯ ಸಮ್ಮೇಳನ ಹಾದಿಯಾಗಲಿ. ಸಾಹಿತ್ಯದಲ್ಲಿ ಸಿದ್ದಾಂತ ಇರಬಾರದು ಸತ್ಯ ಇರಬೇಕು ಎಂದು ಸಾಹಿತಿ ಎಸ್ ಎಲ್ ಭೈರಪ್ಪ ಹೇಳಿದ್ದರು. ಸಾಹಿತ್ಯದಲ್ಲಿ ಸತ್ಯ, ಸಿದ್ದಾಂತ ಎರಡು ಇದೆ. ಆದರೆ ಸತ್ಯ ಯಾವುದು ಎಂಬ ಕೇಳುವ ಮನೋಭಾವನೆ ಬೇಕು.  ಅನ್ಯಾಯ ನಡೆದಾಗ ಸೆಟೆದೇಳುವ ಮನೋಭಾವ ಬೇಕಿದೆ. ಮಾನವೀಯತೆಯ ಸೊಗಡನ್ನು ಹಾಳು ಮಾಡಲು ಅಲ್ಲ ಎಂದು ತಿಳಿಸಿದರು.   

ಚರ್ಚೆಗಳು ಔಪಚಾರಿಕ ಅಲ್ಲ ಬೀದಿಗೆ ಇಳಿದು ಹೋರಾಟಬೇಕು. ನ್ಯಾಯಕ್ಕಾಗಿ ಬೀದಿಗೀಳಿದು ಸಂಸ್ಕೃತಿ ಉಳಿಸೋಣ. ದೇಶದಲ್ಲಿ ಅನೇಕ ಚಿಂತನೆಗಳು ನಡೆದಿದೆ. ಒಂದು ಅಗಾಧ ಚಿಂತನೆ ಎಂದರೆ ಭಾರತದಲ್ಲಿ ಹುಟ್ಟಿದರೆ ಮೋಕ್ಷ ಎನ್ನುತ್ತಾರೆ ಅದಕ್ಕಾಗಿ ನಮ್ಮಲ್ಲಿ ಜನಸಂಖ್ಯೆ ಹೆಚ್ಚಾಗಿದೆ.ಮೊಕ್ಷಕ್ಕಾಗಿ ಹೆಚ್ಚಿನ ಜನಸಂಖ್ಯೆ ಇದೆಯೇನೊ ಎಂದರು.

ಖಿಲ್ಜಿ ಬಗೆಗಿನ ಇತಿಹಾಸಕ್ಕೆ ಭೈರಪ್ಪ ಅವರ ಕಲ್ಪನೆಗಳನ್ನು ಸೇರಿಸುತ್ತಾರೆ. ಖಿಲ್ಜಿ ಮಾಡಿದ ತಪ್ಪಿಗೆ ಮುಸ್ಲಿಮ್ ಸಮುದಾಯವನ್ನೇ ಗುರಿ ಮಾಡುತ್ತಾರೆ. ಅದರೆ. ಆ ಕಾಲದಲ್ಲಿ ದೌರ್ಜನ್ಯದ  ವಿರುದ್ದ ಜನರು ಸೆಣಸಾಡದಿರಲು ಕಾರಣವೇನು? ಅಸಮಾನತೆಯ ಪಾತ್ರವೇನು?ಎಂಬುದನ್ನು ವಿಶ್ಲೇಷಿಸುತ್ತಿಲ್ಲ ಎಂದು ಹೇಳಿದರು. 

ವೇದಿಕೆಯ ಅಧ್ಯಕ್ಷತೆ ಸಾಹಿತಿ ಬರಗೂರು ರಾಮಚಂದ್ರಪ್ಪ ವಹಿಸಿದ್ದರು. ಹೋರಾಟಗಾರ ಮಾವಳ್ಳಿ ಶಂಕರ್, ಸುಕನ್ಯಾ ಮಾರುತಿ, ಹಿರಿಯ ಪತ್ರಕರ್ತ ಬಿ.ಎಂ.ಹನೀಫ್, ನಿವೃತ್ತ ಉಪನ್ಯಾಸಕ ಎ.ಬಿ. ರಾಮಚಂದ್ರಪ್ಪ, ಎಂ.ಟಿ. ಸುಭಾಶ್ಚಂದ್ರ, ಬಿ.ಎನ್ ಮಲ್ಲೇಶ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News