ಕೊಪ್ಪಳ: ಭೀಕರ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ಐವರು ಬಲಿ
ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ.
ಮೃತರನ್ನು ಬಿನ್ನಾಳ ಗ್ರಾಮದ ದೇವಪ್ಪ ಕೊಪ್ಪದ (62), ಗಿರಿಜಮ್ಮ (45), ಶಾಂತಮ್ಮ (32), ಪಾರ್ವತಮ್ಮ(32) ಮತ್ತು ಕಸ್ತೂರಿ (22) ಎಂದು ಗುರುತಿಸಲಾಗಿದೆ. ಗಾಯಾಳುಗಳ ಪೈಕಿ ಏಳು ವರ್ಷದ ಬಾಲಕ ಪುಟ್ಟರಾಜು ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಅವರೆಲ್ಲರಿಗೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕೊಪ್ಪಳದಲ್ಲಿ ಸದ್ಯ ಪೊಲೀಸ್ ಇಲಾಖೆಯ ಡಿಎಆರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶರಣಪ್ಪ ಕೊಪ್ಪದ ಅವರ ಮೊಮ್ಮಗಳ (ಮಗನ ಮಗಳು) ಜನ್ಮದಿನದ ಕಾರ್ಯಕ್ರಮ ನಗರದ ಹೋಟೆಲ್‌ವೊಂದರಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವ ಗ್ರಾಮ ಕುಕನೂರು ತಾಲ್ಲೂಕಿನ ಬಿನ್ನಾಳ ಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಸ್ಕಾರ್ಪಿಯೋ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತಕ್ಕೆ ಕಾರಣವೇನೆಂಬುದಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.