ಆಂಧ್ರದಲ್ಲಿ ರಸ್ತೆ ಅಪಘಾತ: ಬೆಂಗಳೂರಿನ ಇಬ್ಬರು ಪೊಲೀಸರ ಸಹಿತ ಮೂವರು ಮೃತ್ಯು
ಬೆಂಗಳೂರು, ಜು 24: ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ರವಿವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಶಿವಾಜಿ ನಗರ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಸಹಿತ ಮೂವರು ಮೃತಪಟ್ಟಿರುವುದು ವರದಿಯಾಗಿದೆ.
ಮೃತರನ್ನು ಶಿವಾಜಿ ನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ಅವಿನಾಶ್, ಕಾನ್ಸ್ಟೇಬಲ್ ಅನಿಲ್ ಹಾಗೂ ಖಾಸಗಿ ಕಾರು ಚಾಲಕ ಜೋಸೆಫ್ ಎಂದು ಗುರುತಿಸಲಾಗಿದೆ.
ಚಿತ್ತೂರಿನಿಂದ ತಿರುಮಲಕ್ಕೆ ಹೋಗುವ ರಸ್ತೆಯ ಪೂತಲಪಟ್ಟು ಮಂಡಲದ ಪಿ. ಕೊಟ್ಟಕೋಟ ರೈಲ್ವೆ ಕೆಳ ಸೇತುವೆ ಬಳಿ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಶಿವಾಜಿ ನಗರದ ಸಬ್ ಇನ್ಸ್‌ಪೆಕ್ಟರ್ ಅವಿನಾಶ್, ಪ್ರೊಬೆಷನರಿ ಪಿಎಸ್ಸೈ ದೀಕ್ಷಿತ್, ಪೊಲೀಸ್ ಕಾನ್ಸ್ಟೇಬಲ್ ಅನಿಲ್ ಸೇರಿ ಆರು ಮಂದಿಯ ತಂಡವು ಡ್ರಗ್ಸ್ ಜಾಲವೊಂದರ ಜಾಡು ಹಿಡಿದು ಕಳೆದ ರಾತ್ರಿ ಆಂಧ್ರ ಪ್ರದೇಶದತ್ತ ಹೊರಡಲು ತೀರ್ಮಾನಿಸಿತ್ತು. ಇದಕ್ಕಾಗಿ ಕ್ಯಾಬ್ ವೊಂದನ್ನು ಬಾಡಿಗೆಗೆ ಗೊತ್ತು ಮಾಡಿದ್ದರು. ಅದರಂತೆ ತಂಡವು ಜೋಸೆಫ್ ಅವರ ಇನೋವಾ ಕಾರಿನಲ್ಲಿ ಹೊರಟಿತ್ತು. ಇವರು ಸಂಚರಿಸುತ್ತಿದ್ದ ಕಾರು ಪೂತಲಪಟ್ಟು ಮಂಡಲದ ಪಿ. ಕೊಟ್ಟಕೋಟ ರೈಲ್ವೆ ಕೆಳ ಸೇತುವೆ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸುಮಾರು 30 ಅಡಿ ದೂರದ ಕಾರು ಇನ್ನೊಂದು ಬದಿಯ ರಸ್ತೆಗೆ ಎಸೆಯಲ್ಪಟ್ಟಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಪ್ರೊಬೆಷನರಿ ಪಿಎಸ್ಸೈ ದೀಕ್ಷಿತ್, ಕಾನ್ಸ್ಟೇಬಲ್ ಶರಣಬಸವ ಎಂಬವರು ಸೇರಿದಂತೆ ಐವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.