ಕೊಳ್ಳೇಗಾಲ | ಬೈಕಿಗೆ ಬಸ್ ಢಿಕ್ಕಿ: ಬೈಕ್ ಸವಾರ ಯುವಕ ಮೃತ್ಯು
Update: 2022-07-24 15:33 IST
ಚಾಮರಾಜನಗರ, ಜು.24: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಪ್ರವಾಸಿ ಮಂದಿರದ ಸರ್ಕಲ್ ನಲ್ಲಿ ಶನಿವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಮೂಲತಃ ಹನೂರು ತಾಲೂಕಿನ ಹೂಗ್ಯಂ ಗ್ರಾಮ ನಿವಾಸಿ ಮುನೇಶ್(27) ಮೃತಪಟ್ಟ ಯುವಕ. ಇವರು ಕೊಳ್ಳೇಗಾಲದ ಕೃಷ್ಣಯ್ಯನ ಕಟ್ಟೆಯಲ್ಲಿರುವ ತನ್ನ ಮಾವನ ಮನೆಯಲ್ಲಿ ವಾಸ್ತವ್ಯವಿದ್ದು, ಜೇಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು.
ಮುನೇಶ್ ಶನಿವಾರ ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಐಬಿ ವೃತ್ತದಲ್ಲಿ ಅವರು ಸಂಚರಿಸುತ್ತಿದ್ದ ಬೈಕಿಗೆ ಬಸ್ ಢಿಕ್ಕಿ ಹೊಡೆಯಿತೆನ್ನಲಾಗಿದೆ. ತೀವ್ರ ಗಾಯಗೊಂಡಿದ್ದ ಮುನೇಶ್ ರನ್ನು ಕೂಡಲೇ ಉಪವಿಭಾಗ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದಿದ್ದಾರೆ.
ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ.