ಈಡಿ ವಿರುದ್ಧ ಜ.26ಕ್ಕೆ ಮೌನ ಸತ್ಯಾಗ್ರಹ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

Update: 2022-07-24 11:57 GMT
ಡಿ.ಕೆ. ಶಿವಕುಮಾರ್ 

ಬೆಂಗಳೂರು: ‘ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇದೇ 26 ರಂದು ವಿಚಾರಣೆಗೆ ಬರುವಂತೆ ಮತ್ತೆ ಸಮನ್ಸ್ ಜಾರಿ ಮಾಡಿದ್ದಾರೆ. ನನ್ನ ಪ್ರಕರಣದಲ್ಲಿ ನನ್ನ ತಾಯಿಗೂ ಇದೇ ರೀತಿ ಕಿರುಕುಳ ನೀಡಿದ್ದರು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನನ್ನ ತಾಯಿಗೆ ನೋಟಿಸ್ ನೀಡಿದ್ದ ಸಂದರ್ಭದಲ್ಲಿ ಮನೆಯಲ್ಲೇ ವಿಚಾರಣೆ ಮಾಡಲು ನ್ಯಾಯಾಲಯದ ಮೊರೆ ಹೋಗಿದ್ದೆ. ಆದರೆ, ಸೋನಿಯಾ ಗಾಂಧಿ ನ್ಯಾಯಾಲಯದ ಮೊರೆ ಹೋಗದೆ ಧೈರ್ಯವಾಗಿ ವಿಚಾರಣೆ ಎದುರಿಸಿ ಬಂದಿದ್ದಾರೆ. ಆದರೂ ಕಿರುಕುಳ ನಿಲ್ಲುತ್ತಿಲ್ಲ' ಎಂದು ದೂರಿದರು.

‘ಜು.26ಕ್ಕೆ ಬೆಂಗಳೂರಿನ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಬಳಿ ರಾಜ್ಯದ ಎಲ್ಲ ನಾಯಕರು, ಶಾಸಕರು, ಬ್ಲಾಕ್ ಅಧ್ಯಕ್ಷರು, ಕಾರ್ಫೋರೇಟರ್, ಮಾಜಿ ಕಾರ್ಫೋರೇಟರ್, ಪಕ್ಷದ ಪದಾಧಿಕಾರಿಗಳು ಎಲ್ಲರೂ ಅಂದು ಬೆಳಗ್ಗೆ 10 ಗಂಟೆಗೆ ಮೌನ ಸತ್ಯಾಗ್ರಹ ಮಾಡಲಿದ್ದೇವೆ' ಎಂದು ಶಿವಕುಮಾರ್ ಮಾಹಿತಿ ನೀಡಿದರು.

‘ಭಾರತ ಜೋಡೋ' ಪಾದಯಾತ್ರೆ ಚಾಮರಾಜನಗರ, ಮೈಸೂರು, ಶ್ರೀರಂಗಪಟ್ಟಣ, ನಾಗಮಂಗಲ, ಮೇಲುಕೋಟೆ, ಪಾಂಡವಪುರ, ಮಾರ್ಗವಾಗಿ ತುಮಕೂರು ಜಿಲ್ಲೆ ಪ್ರವೇಶಿಸಲಿದೆ. ಇದಕ್ಕೆ ಸಂಬಂಧಿಸಿದ ತಯಾರಿ ಕುರಿತು ಚರ್ಚೆ ಮಾಡಿದ್ದೇವೆ. ಪಕ್ಷದ ಸಂಘಟನೆ ವಿಚಾರ ಹೊರತುಪಡಿಸಿ ಬೇರೆ ವಿಚಾರವಾಗಿ ಯಾವುದೇ ನಾಯಕರು ನನ್ನ ಬಳಿ ಚರ್ಚೆ ಮಾಡಿಲ್ಲ, ಮಾಡಲು ಅವಕಾಶ ನೀಡುವುದಿಲ್ಲ' ಎಂದು ಅವರು ವಿವರಿಸಿದರು.

‘ಕಾಂಗ್ರೆಸ್ ಜಗಳ ಬೀದಿಗೆ ಬಂದಿದೆ. ಒಂದು ಹುದ್ದೆಗೆ ನಾಲ್ಕು ಜನ ಕಿತ್ತಾಡುತ್ತಿದ್ದಾರೆಂಬ ಸಚಿವ ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಬಹಳ ಸಂತೋಷ. ಜನ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಲಿದ್ದಾರೆ ಎಂಬ ಸತ್ಯವನ್ನು ಅವರು ಒಪ್ಪಿಕೊಂಡಿದ್ದಾರೆ. ಅವರಿಗೆ ಅಭಿನಂದನೆಗಳು' ಎಂದು ಲೇವಡಿ ಮಾಡಿದರು.

‘ಬಿಜೆಪಿ ನೋಡಿ ಕಾಂಗ್ರೆಸ್ ಶಿಸ್ತು ಕಲಿಯಬೇಕಿಲ್ಲ. ಬದಲಿಗೆ ಅವರನ್ನು ನೋಡಿ ಭ್ರಷ್ಟಾಚಾರ, ಲೂಟಿ ಮಾಡೋದನ್ನು ಕಲಿಯಬೇಕಾ? ಅಯ್ಯೋ ಅವರ ಪಕ್ಷ, ಅಲ್ಲಿರುವ ಕೊಳಕು, ಅವರ ನಾಯಕರನ್ನು ಅವರು ಅರಗಿಸಿಕೊಳ್ಳಲು ಸಾಧ್ಯವಿದೆಯೇ ಎಂದು ಅವರ ಕಾರ್ಯಕರ್ತರನ್ನೆ ಕೇಳಿ' 
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News