ಶಿಕ್ಷಣ ಸಚಿವರ ಸರ್ವಾಧಿಕಾರಿ ಧೋರಣೆಗೆ ನಿದರ್ಶನ: ನಿರಂಜನಾರಾಧ್ಯ ಖಂಡನೆ

Update: 2022-07-24 14:10 GMT

ಬೆಂಗಳೂರು, ಜು.24: ಸಚಿವ ನಾಗೇಶ್ ಅವರ ಅವೈಜ್ಞಾನಿಕ ಶಾಲಾ ವಿಲೀನಗಳ ಪ್ರಸ್ತಾವನೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಶಿಕ್ಷಕ ವೀರಣ್ಣ ಮಡಿವಾಳ ಅವರಿಗೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಕಾರಣ ಕೇಳಿ ನೋಟಿಸ್ ನೀಡಿರುವ ಕ್ರಮ ಏಕಪಕ್ಷೀಯವಾಗಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಖಂಡಿಸಿದ್ದಾರೆ.

ಈ ಕುರಿತು ರವಿವಾರ ಪ್ರಕಟನೆ ಹೊರಡಿಸಿರುವ ಅವರು, ಅಧಿಕಾರಿಗಳು ತಮ್ಮ ವಿವೇಚನೆಯನ್ನು ಉಪಯೋಗಿಸದೆ ಸಚಿವರ ತಾಳಕ್ಕೆ ಕುಣಿಯುವುದು ನಿಜಕ್ಕೂ ವಿಷಾದನೀಯ. ಇದು ವಸಹಾಹತುಶಾಹಿ ಜೀ ಹುಜೂರ್ ಸಂಸ್ಕೃತಿಯಾಗಿದೆ. ಇದೆಲ್ಲವೂ, ಸಚಿವ ನಾಗೇಶ್ ಅವರ ನಿರ್ದೇಶನದಂತೆ ನಡೆಯುತ್ತಿದೆ. ಅವರ ಕಾರ್ಯವಿಧಾನ ಸರ್ವಾಧಿಕಾರಿ ಧೋರಣೆಯಾಗಿದೆ. ಅವರ ಅವೈಜ್ಞಾನಿಕ, ಅಸಂವಿಧಾನಿಕ, ಅಪ್ರಬುದ್ಧ ತೀರ್ಮಾನಗಳನ್ನು ವಿರೋಧಿಸುವರನ್ನು ವೈರಿಗಳಂತೆ ಪರಿಭಾವಿಸುವ ಮನಸ್ಥಿತಿ ಅವರದ್ದಾಗಿದೆ. ಬೌದ್ಧಿಕ ದಿವಾಳಿತನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರ ಚರ್ಚೆಗೆ ಇರಬೇಕಾದ ಸ್ವತಂತ್ರವನ್ನು ಅವರು ಕಸಿದುಕೊಂಡು, ಮುಚ್ಚಿದ ಮನಸ್ಥಿತಿಯನ್ನು ಅನಾವರಣಗೊಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಬ್ಬ ನಾಗರಿಕನಾಗಿ ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಭೂತ ಹಕ್ಕು ಸಂವಿಧಾನಬದ್ಧವಾಗಿ ಪ್ರತಿಯೊಬ್ಬ ನಾಗರಿಕರಿಗೂ ಇದೆ. ಇದು ಸರಕಾರಿ ನೌಕರರಿಗೂ ಅನ್ವಯವಾಗುತ್ತದೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಜೊತೆಗೆ ಸಚಿವರ ಪ್ರಸ್ತಾವನೆಯನ್ನು ಶಿಕ್ಷಕ ವೀರಣ್ಣ ಮಡಿವಾಳ ಅವರು ಟೀಕಿಸಿಲ್ಲ. ಬದಲಾಗಿ ಅವರ ಅಭಿಪ್ರಾಯ ಹೇಳಿದ್ದಾರೆ. ಅದನ್ನು ಮೆಚ್ಚಿ ಗೌರವಿಸಬೇಕಾದ ಜಾಗದಲ್ಲಿ, ತಮ್ಮ  ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಡಿಡಿಪಿಐ ಮೂಲಕ ನೋಟಿಸ್ ಕೊಡಿಸಿರುವುದು ಸಚಿವರ ಹಿಟ್ಲರ್ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

ಇದೇ ಬಗೆಯ ಧೋರಣೆ ಪಠ್ಯ ಪರಿಷ್ಕರಣೆ, ನಿಲುವು ಪ್ರಬಂಧಗಳ (ಪೊಸಿಷನ್ ಪೇಪರ್) ರಚನೆ ಮತ್ತು ಎನ್‍ಇಪಿ ಅನುಷ್ಠಾನದಲ್ಲಿಯೂ ಎದ್ದುಕಾಣುತ್ತದೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಗೌರವಿಸದ ಸಚಿವ ನಾಗೇಶ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಚಿವರಾಗಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದ್ದಾರೆ.

ಸಚಿವರ ಈ ನಡೆಯನ್ನು ಅಧಿಕಾರಿಗಳು, ಶಿಕ್ಷಕರು ಹಾಗೂ ಪ್ರಜ್ಞಾವಂತ ನಾಗರೀಕರು ಪ್ರತಿಭಟಿಸಬೇಕು. ಇಲ್ಲದಿದ್ದರೆ ಮುಂದೊಂದು ದಿನ ವೀರಣ್ಣ ಮಡಿವಾಳರಿಗೆ ಬಂದ ಪರಿಸ್ಥಿತಿ ಬೇರೆಯವರಿಗೂ ಬಂದರೆ ಅಚ್ಚರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News