×
Ad

ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆಗೆ ಅಭಿಯಾನ: ʼಆಸ್ಪತ್ರೆ ಇಲ್ಲದಿದ್ದರೆ ಮತದಾನವೂ ಇಲ್ಲʼವೆಂದ ನೆಟ್ಟಿಗರು

Update: 2022-07-24 22:22 IST

ಕಾರವಾರ: ಇತ್ತೀಚೆಗೆ ಆಂಬುಲೆನ್ಸ್ ಅಪಘಾತಗೊಂಡು ದಲ್ಲಿ 4 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೈಟೆಕ್ ಆಸ್ಪತ್ರೆ ಕೂಗು ಮತ್ತೆ ಕೇಳಿ ಬಂದಿದೆ. ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆಯೊಂದನ್ನು ನಿರ್ಮಿಸಿ ಕೊಡುವಂತೆ ಸರ್ಕಾರವನ್ನು ಆಗ್ರಹಿಸಿರುವ ಜಿಲ್ಲೆಯ ಜನರು ಟ್ವಿಟರಿನಲ್ಲಿ ಎರಡನೇ ಬಾರಿ ರಾಷ್ಟ್ರೀಯ ಅಭಿಯಾನ ನಡೆಸಿದ್ದಾರೆ.  

ಜಿಲ್ಲೆಯ ವಿವಿಧೆಡೆ ಹೋರಾಟಕ್ಕೂ ಕರೆ ನೀಡಲಾಗಿದ್ದು, ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಮಂಜೂರು ಮಾಡದೇ ಇದ್ದಲ್ಲಿ ಮತದಾನ ಬಹಿಷ್ಕರಿಸುವುದಾಗಿ ಟ್ವಿಟರ್ ಅಭಿಯಾನ ಆರಂಭಿಸಿದ್ದಾರೆ.    ಈ ಹಿಂದೆ ಹೆಚ್‌ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವಿದ್ದಾಗಲೂ #WeNeedEmergencyHospitalInUttaraKannada ಹ್ಯಾಷ್‌ಟ್ಯಾಗ್‌ನಡಿಯಲ್ಲಿ ಟ್ವಿಟರ್‌ ಅಭಿಯಾನ ನಡೆಸಲಾಗಿತ್ತು. ನಿರಂತರ ಬೇಡಿಕೆಗೆ ಯಾವ ಮನ್ನಣೆಯೂ ಸಿಗದೆ ಬೇಸತ್ತಿರುವ ಜನರು ಇದೀಗ ಮತ್ತೊಮ್ಮೆ ಟ್ವಿಟರ್‌ ಅಭಿಯಾನ ಮಾಡಿದ್ದಾರೆ. #NoHospitalNoVote (ಆಸ್ಪತ್ರೆ ಇಲ್ಲದಿದ್ದರೆ ಮತದಾನ ಇಲ್ಲ) ಎಂಬ ಹ್ಯಾಷ್‌ಟ್ಯಾಗ್‌ನಡಿಯಲ್ಲಿ ಅಭಿಯಾನ ಜೋರಾಗಿಯೇ ನಡೆಯುತ್ತಿದೆ.

ಈ ಅಭಿಯಾನಕ್ಕೆ ವಿರೋಧ ಪಕ್ಷ ನಾಯಕ ಸಿದ್ಧರಾಮಯ್ಯ ದನಿಗೂಡಿಸಿದ್ದು, “ಸುಸಜ್ಜಿತ ತುರ್ತು ಚಿಕಿತ್ಸಾ ವ್ಯವಸ್ಥೆಗೆ ಆಗ್ರಹಿಸಿ ಉತ್ತರ ಕನ್ನಡದ ಜನರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಅಹವಾಲನ್ನು ಮುಕ್ತ ಮನಸಿನಿಂದ ಆಲಿಸಿ, ಸಮಸ್ಯೆ ಬಗೆಹರಿಸುವತ್ತ ಕಾರ್ಯಪ್ರವೃತ್ತವಾಗಬೇಕು” ಎಂದು ಒತ್ತಾಯಿಸಿದ್ದಾರೆ.  

ಕಳೆದ ನಾಲ್ಕು ದಿನಗಳ ಹಿಂದೆ ಬೈಂದೂರಿನ ಶಿರೂರು ಟೋಲ್‌ಗೇಟ್ ಬಳಿ ವೇಗವಾಗಿ ಹೋಗುತ್ತಿದ್ದ ಆಂಬ್ಯುಲೆನ್ಸ್ ಭೀಕರ ಅಪಘಾತಕ್ಕೆ ಒಳಗಾಗಿತ್ತು. ಈ ಅಪಘಾತದಲ್ಲಿ ಹೊನ್ನಾವರದ ನಾಲ್ವರು ಸಾವನ್ನಪ್ಪಿದ್ದರು. ಹೊನ್ನಾವರದಲ್ಲಿ ಚಿಕಿತ್ಸೆ ಸಾಧ್ಯವಾಗದೇ ಉಡುಪಿಗೆ ಕರೆದುಕೊಂಡು ಹೋಗಲು ಸೂಚಿಸಿದ ಹಿನ್ನೆಲೆಯಲ್ಲಿ ಆಂಬ್ಯುಲೆನ್ಸ್ ವೇಗವಾಗಿ ತೆರಳುತ್ತಿರುವಾಗ ಅಪಘಾತ ನಡೆದಿತ್ತು. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದ್ದರಿಂದ ಇಂತಹ ಅಪಘಾತಗಳು ಹೆಚ್ಚುತ್ತಿವೆ ಮತ್ತು ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆಯಿಲ್ಲದೆ ದಾರಿ ಮಧ್ಯೆಯೇ ಅನೇಕರು ಸಾವನ್ನಪ್ಪುತ್ತಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಂಸದ ಅನಂತ ಕುಮಾರ್‌ ಹೆಗ್ಡೆ ವಿರುದ್ಧ ಆಕ್ರೋಶ

ಕಳೆದ ಎರಡು ದಶಕಗಳಿಂದ ಉತ್ತರ ಕನ್ನಡದ ಸಂಸದರಾಗಿರುವ ಅನಂತಕುಮಾರ್‌ ಹೆಗ್ಡೆ ಸೇರಿದಂತೆ ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ ತಿರುಗಿದೆ. 25 ವರ್ಷ ಸಂಸದರಾಗಿದ್ದರೂ ಜಿಲ್ಲೆಗೊಂದು ಸುಸಜ್ಜಿತ ಆಸ್ಪತ್ರೆ ಕಲ್ಪಿಸಲು ಹೆಗ್ಡೆಗೆ ಸಾಧ್ಯವಾಗಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‌

“ಉತ್ತರ ಕನ್ನಡಕ್ಕೆ ಸುಸ್ವಾಗತ. ದಯವಿಟ್ಟು ನಿಧಾನವಾಗಿ ಚಲಿಸಿ, 25 ವರ್ಷ ಸಂಸದನಾದರೂ ಈ ಜಿಲ್ಲೆಗೆ ಆಸ್ಪತ್ರೆ ಕಟ್ಟಲು ನನ್ನಿಂದ ಸಾಧ್ಯವಾಗಿಲ್ಲ. ಹಿಂದುತ್ವವನ್ನು ಮತಕ್ಕಾಗಿ ಬಳಸುವುದನ್ನು ಬಿಟ್ಟರೆ ನನಗೇನೂ ಗೊತ್ತಿಲ್ಲ.” ಎಂದು ಸಂಸದರ ಭಾವಚಿತ್ರ ಹಾಕಿದ ಪೋಸ್ಟರ್‌ ಅನ್ನು ನೆಟ್ಟಿಗರು ಹಂಚಿಕೊಂಡು ಕಿಡಿ ಕಾರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News