ಸರಕಾರಿ ಶಾಲೆಗಳ ವಿಲೀನ ಖಂಡಿಸಿದ ಶಿಕ್ಷಕನಿಗೆ ಶಿಕ್ಷಣ ಇಲಾಖೆಯಿಂದ ನೋಟಿಸ್
ಬೆಂಗಳೂರು, ಜು.24: ರಾಜ್ಯದ ವಿವಿಧೆಡೆ 13,800 ಸರಕಾರಿ ಶಾಲೆಗಳನ್ನು ವಿಲೀನ ಗೊಳಿಸಲಾಗುವುದು ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದ ರಾಯಬಾಗದ ನಿಡಗುಂದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ವೀರಣ್ಣ ಮಡಿವಾಳರ ಎಂಬವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ನೋಟಿಸ್ ಜಾರಿಗೊಳಿಸಿದೆ.
ಶಾಲೆಗಳ ವಿಲೀನ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಶಿಕ್ಷಕರಿಗೆ ನೋಟೀಸ್ ಜಾರಿಗೊಳಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುತ್ತಿದೆ ಎಂಬ ಟೀಕೆಗಳು ಇದೀಗ ಮುನ್ನೆಲೆಗೆ ಬಂದಿವೆ.
ಕವಿಯೂ ಆಗಿರುವ ವೀರಣ್ಣ ಮಡಿವಾಳರ ಅವರು ಸರಕಾರಿ ಶಾಲೆಯಲ್ಲಿದ್ದ ಮೂಲ ಸೌಕರ್ಯಗಳ ಕೊರತೆ ನೀಗಿಸಿ ಶಾಲೆಗೆ ಮಕ್ಕಳನ್ನು ಆಕರ್ಷಿಸಿದ್ದರು. ಇವರ ಪರಿಶ್ರಮ ಮತ್ತು ಆಸಕ್ತಿ ಫಲವಾಗಿ ನಿಡಗುಂದಿಯ ಈ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗಿದ್ದರು. ಇವರ ಕಾರ್ಯವೈಖರಿಯನ್ನು ಮೆಚ್ಚಿದ್ದ ಹಿಂದಿನ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಅವರು ಅಭಿನಂದಿಸಿದ್ದರು.
ನೋಟಿಸ್‌ನಲ್ಲೇನಿದೆ?
13,800 ಸರಕಾರಿ ಶಾಲೆ ವಿಲೀನ ಎಂಬ ತಲೆಬರಹದಡಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ನೀಡಿದ್ದ ಹೇಳಿಕೆಯನ್ನು ಟೀಕಿಸಿ 13,800 ಶಾಲೆ ವಿಲೀನ ಅಲ್ಲ ಅಷ್ಟು ಶಾಲೆಗಳ ಹತ್ಯಾಕಾಂಡ, ಸರಕಾರಿ ಶಾಲಾ ಮಕ್ಕಳ ಮಾರಣ ಹೋಮ ಎಂದು ನಿಮ್ಮ ಅಭಿಪ್ರಾಯವನ್ನು ಸಾಮಾಜಿಕ ಅಂತರ್ಜಾಲದಲ್ಲಿ ಹರಿಬಿಟ್ಟಿದ್ದು ಇದು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ಕ್ಕೆ ವ್ಯತಿರಿಕ್ತವಾಗಿದ್ದು ಅಲ್ಲದೆ ನಡತೆ ನಿಯಮಗಳು 1966ರ ನಿಯಮ 3ನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದ್ದು ಈ ಕುರಿತು ನಿಮ್ಮ ಮೇಲೆ ಶಿಸ್ತು ಕ್ರಮ ಏಕೆ ಜರುಗಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಚಿಕ್ಕೋಡಿ ವಿಭಾಗದ ಉಪ ನಿರ್ದೇಶಕ ಎಂ.ಎಲ್. ಹಂಚಾಟೆ ಅವರು 2022ರ ಜುಲೈ 22ರಂದು ನೋಟಿಸ್ ಜಾರಿಗೊಳಿಸಿದ್ದಾರೆ.
ಆದರೀಗ ಶಾಲೆಗಳ ವಿಲೀನ ಕುರಿತು ಹಾಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ನೀಡಿದ್ದ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಮುಂದಿರಿಸಿ ನೋಟೀಸ್ ನೀಡಿರುವುದು ಸರಕಾರದ ನೀತಿಯನ್ನು ಟೀಕಿಸಿಬಾರದು ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದಂತಾಗಿದೆ. ನೋಟೀಸ್‌ನ ಪ್ರತಿ ‘the-file.in’ಗೆ ಲಭ್ಯವಾಗಿದೆ.