ಪುರೋಹಿತರು ಪರಿಷ್ಕರಿಸಿರುವ ಪಠ್ಯಗಳ ವಿರುದ್ಧ ರಾಜ್ಯಾದ್ಯಂತ ಜನಜಾಗೃತಿ: ಸಾಹಿತಿ ಮುಕುಂದರಾಜ್

Update: 2022-07-25 12:38 GMT

ಚಿಕ್ಕಮಗಳೂರು, ಜು.25: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸಕ್ತ ಪರಿಷ್ಕರಣಾ ಸಮಿತಿ ಪರಿಷ್ಕರಿಸುವ ಪಠ್ಯಪುಸ್ತಕಗಳು ಪುರೋಹಿತಶಾಹಿಗಳ ಪರವಾಗಿರುವ ಪಠ್ಯವಾಗಿದೆ. ಇಂತಹ ಪಠ್ಯಗಳಿಂದ ಮಕ್ಕಳ ಕಲಿಕೆ ಮೇಲೆ ದುಷ್ಪರಿಣಾಮ ಬೀರಲಿದೆ. ಪುರೋಹಿತಶಾಹಿಗಳಿಂದ ಪರಿಷ್ಕರಿಸಲ್ಪಟ್ಟ ಪಠ್ಯಗಳನ್ನು ಮಕ್ಕಳ ಕೈಗೆ ನೀಡಬಾರದು ಎಂದು ಸರಕಾರದ ಮೇಲೆ ಎಷ್ಟೇ ಒತ್ತಡ ಹೇರಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯಗಳ ಬಗ್ಗೆ ರಾಜ್ಯಾದ್ಯಂತ ಜನಜಾಗೃತಿ ಮೂಡಿಸಲಾಗುವುದು ಎಂದು ಖ್ಯಾತ ಸಾಹಿತಿ, ಕವಿ, ಚಿಂತಕ ಮುಕುಂದರಾಜ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಪಠ್ಯ ವಿರೋಧಿಸಿ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವಮಾನವ ಕುವೆಂಪು ವೇದಿಕೆ, ಜನದನಿ ಸಂಘಟನೆ. ಕ್ಯಾತನಬೀಡು ಪ್ರತಿಷ್ಠಾನ ಹಾಗೂ ಇತರ ದಲಿತ, ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಕುಪ್ಪಳ್ಳಿಯಿಂದ ಕೂಡಲ ಸಂಗಮದವರೆಗೂ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು. 

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿದ ಪಠ್ಯ ಹಲವು ಲೋಪಗಳನ್ನು ಹೊಂದಿದ್ದು, ಭಾರೀ ಅವಾಂತರಗಳಿಗೆ ಕಾರಣವಾಗಿದೆ. ಈ ಸಮಿತಿ ಪರಿಷ್ಕರಿಸಿರುವ ಪಠ್ಯವನ್ನು ರದ್ದು ಮಾಡಬೇಕೆಂದು ರಾಜ್ಯ ಸರಕಾರಕ್ಕೆ ರಾಜ್ಯದ ಸಾಹಿತಿಗಳು, ಮಠಾಧೀಶರು, ಪ್ರಗತಿಪರರು, ಶಿಕ್ಷಣ ತಜ್ಞರು ಹೋರಾಟ, ಚಳವಳಿಯಂತಹ ಹಲವು ಮಾರ್ಗಗಳ ಮೂಲಕ ಮನವಿ ಮಾಡಿದ್ದಾರೆ. ಆದರೆ ರಾಜ್ಯ ಸರಕಾರ ಇದ್ಯಾವುದಕ್ಕೂ ಕಿಮ್ಮತ್ತು ನೀಡಿಲ್ಲ ಎಂದರು.

ಪರಿಷ್ಕೃತ ಪಠ್ಯದಲ್ಲಿ ಲೋಪ ಇರುವುದನ್ನು, ಮಹನೀಯರಿಗೆ ಆಗಿರುವ ಅವಮಾನಗಳನ್ನು ಸರಕಾರ ಒಪ್ಪಿದೆಯಾದರೂ ಲೋಪ ಇರುವ ಪಠ್ಯವನ್ನು ಹಿಂಪಡೆದಿಲ್ಲ, ಪಠ್ಯದಲ್ಲಿರುವ ತಪ್ಪುಗಳನ್ನು ಸರಿಪಡಿಸಿಲ್ಲ, ಆದರೆ ಈ ಸಂಬಂಧ ಕೆಲ ತಿದ್ದುಪಡಿ ಮಾಡಿರುವುದಾಗಿ ಹೇಳಿಕೆ ನೀಡಿ ಕೆಲ ಆದೇಶಗಳನ್ನು ಹೊರಡಿಸುತ್ತಿದೆ. ತಿದ್ದುಪಡಿ ಸಂಬಂಧ ಪ್ರತೀ ಶಾಲಾ ಶಿಕ್ಷಕರ ಕೈಗೆ ತಿಪ್ಪುಪಡಿಯ ಒಂದು ಪ್ರತಿಯನ್ನು ನೀಡಿ ಅದನ್ನೇ ಶಿಕ್ಷಕರು ಮಕ್ಕಳಿಗೆ ಬೋಧಿಸಬೇಕೆಂದು ಆದೇಶಿಸಿದೆ. ಇಂತಹ ವ್ಯವಸ್ಥೆಯಿಂದಾಗಿ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಸದಸ್ಯರೆಲ್ಲರೂ ಒಂದೇ ಜಾತಿಗೆ ಸೇರಿದ್ದು, ಈ ಸದಸ್ಯರು ಪುರೋಹಿತಶಾಹಿ ವ್ಯವಸ್ಥೆಯನ್ನು ವೈಭವೀಕರಿಸಿದ್ದಾರೆ. ಬ್ರಾಹ್ಮಣ ಸಮುದಾಯದವರ ಪಠ್ಯಗಳನ್ನೇ ಪಠ್ಯಕ್ಕೆ ಸೇರಿಸಿದ್ದಾರೆ. ಮೋದಿ ಸರಕಾರವನ್ನು ಅಧಿಕಾರಕ್ಕೆ ತರಲು ಬರೀ ಸುಳ್ಳನ್ನೇ ಹೇಳಿದ್ದ ಚಕ್ರವರ್ತಿ ಸೂಲಿಬೆಲೆ, ಶತಾವದಾನಿ ಗಣೇಶ್‍ನಂತಹ ಬಿಜೆಪಿವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯಾದರೂ ಏನು? ಇವರ ಪಠ್ಯಗಳನ್ನು ಮಕ್ಕಳಿಗಾಗುವ ಲಾಭವಾದರೂ ಏನು ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ ಜನರ ಪ್ರಶ್ನೆಗಳಿಗೆ ಉತ್ತರಿಸಬೇಕು. ತಪ್ಪುಗಳಿದ್ದರೇ ಅದನ್ನು ತಿದ್ದಿಕೊಳ್ಳಬೇಕು. ಪಠ್ಯಕ್ರಮ ತಿದ್ದುಪಡಿಯಲ್ಲಾಗಿರುವ ಲೋಪಗಳ ಬಗ್ಗೆ ಕವಿಗಳು, ಸಾಹಿತಿಗಳು, ವಿವಿಧ ಪೀಠಗಳ ಗುರುಗಳು, ಸ್ವಾಮೀಜಿಗಳು ಖಂಡಿಸಿದ್ದರೂ ರಾಜ್ಯ ಸರಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಎಂದು ದೂರಿದ ಅವರು, ರಾಷ್ಟ್ರಕವಿ ಕುವೆಂಪು, ಡಾ.ಬಿ.ಆರ್.ಅಂಬೇಡ್ಕರ್, ನಾರಾಯಣಗುರು, ಬಸವಣ್ಣ ಸೇರಿದಂತೆ ಅನೇಕ ಸಮಾಜ ಸುಧಾರಕರಿಗೆ ಈ ಸಮಿತಿ ಅವಮಾನ, ಅಪಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಧರ್ಮದ ಹೆಸರಿನಲ್ಲಿ ಇಂದು ಜಾತಿ ರಾಜಕಾರಣ ಮಾಡಲಾಗುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ. ರಾಜ್ಯ ಸರಕಾರದ ಆಡಳಿತ ವಿಧಾನಸೌಧದಿಂದ ನಡೆಯುತ್ತಿಲ್ಲ ಕೇಶವ ಕೃಪದಿಂದ ನಡೆಯುತ್ತಿದೆ. ದಿಲ್ಲಿ ಸರಕಾರ ಸಂಸತ್‍ನಿಂದ ಅಧಿಕಾರ ನಡೆಸುತ್ತಿಲ್ಲ, ನಾಗಪುರದ ಆದೇಶದಂತೆ ಕೆಲಸ ಮಾಡುತ್ತಿದೆ. ಆರೆಸ್ಸೆಸ್ ರಾಜ್ಯ, ಕೇಂದ್ರ ಸರಕಾರಗಳನು ನಿಯಂತ್ರಿಸುತ್ತಿದೆ ಎಂದು ಆರೋಪಿಸಿದರು.

ಪಠ್ಯ ಪರಿಷ್ಕರಣೆಯನ್ನು ವಿರೋಧಿಸಿ ಪಠ್ಯಗಳ ಜಲಸಮಾಧಿಯಂತಹ ಅನೇಕ ಹೋರಾಟಗಳನ್ನು ರೂಪಿಸಲಾಗಿದೆ. ಜನಜಾಗೃತಿ ಮೂಡಿಸಲಾಗಿದೆ. ಅದರಂತೆ ವಿಶ್ವಮಾನವ ಕುವೆಂಪು ಹೋರಾಟ ಸಮಿತಿ ಹಾಗೂ ಇತರ ಸಂಘಟನೆಗಳು ಒಗ್ಗೂಡಿ ಕುಪ್ಪಳ್ಳಿಯಿಂದ ಕೂಡಲ ಸಂಗಮ ದವರೆಗೂ ಕಲ್ನಾಡಿಗೆ ಜಾಥ ಹಮ್ಮಿಕೊಂಡು ಜನಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ನಿವೃತ್ತ ಪ್ರಾಂಶುಪಾಲ ಭೈರೇಗೌಡ ಮಾತನಾಡಿ, ರೋಹಿತ್ ಚಕ್ರತೀರ್ಥ ಸಮಿತಿ ರಚಿಸಿರುವ ಪರಿಷ್ಕೃತ ಪಠ್ಯವನ್ನು ಕೈಬಿಟ್ಟು ಈ ಶೈಕ್ಷಣಿಕ ಸಾಲಿನಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯವನ್ನು ಮಕ್ಕಳಿಗೆ ನೀಡಬೇಕು. ಮುಂದಿನ ದಿನಗಳಲ್ಲಿ ಶಿಕ್ಷಣ ತಜ್ಞರನ್ನು ಒಳಗೊಂಡ ಮತ್ತೊಂದು ಸಮಿತಿ ರಚಿಸಿ ಈಗಿನ ಪಠ್ಯವನ್ನು ಪರಿಷ್ಕರಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಸಂಚಾಲಕ ಮರ್ಲೆ ಅಣ್ಣಯ್ಯ, ರೈತ ಮುಂಖಡ ಗುರುಶಾಂತಪ್ಪ, ರವಿಪ್ರಕಾಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿರುವ ಪಠ್ಯ ವಿರೋಧಿಸಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗಾಗಲೇ ಸಮಾನ ಮನಸ್ಕರು ಸೇರಿ ಸಂವಾದ, ಕಾಲ್ನಡಿಗೆ ಜಾಥಾದಂತಹ ಅನೇಕ ಹೋರಾಟವನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ 50ಸಾವಿರ ಕರಪತ್ರಗಳನ್ನು ಮುದ್ರಿಸಿ ಸ್ವಾಮೀಜಿಗಳು, ಜನಪರ ನಾಯಕರನ್ನು ಒಗ್ಗೂಡಿಸಿ ಚಿಕ್ಕಮಗಳೂರು ನಗರದ 15 ಕಿಮೀ ವ್ಯಾಪ್ತಿಯಲ್ಲಿ ಜಾಗೃತಿ ಜಾಥ ನಡೆಸಲಾಗುವುದು. ನಗರದ ಪ್ರತೀ ಮನೆ ಮನೆಗಳಿಗೆ ತೆರಳಿ 50 ಸಾವಿರ ಕರಪತ್ರಗಳನ್ನು ವಿತರಿಸಿ ಜನಜಾಗೃತಿ ಮೂಡಿಸಲಾಗುವುದು. ಕುಪ್ಪಳ್ಳಿಯಿಂದ ಕೂಡಲಸಂಗಮದವರೆಗೂ ಜಾಥಾ ನಡೆಸಲಾಗುವುದು. ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು.

- ರವೀಶ್ ಕ್ಯಾತನಬೀಡು, ಕ್ಯಾತನಬೀಡು ಪ್ರತಿಷ್ಠಾನದ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News