ನಾನು ರಾಜಕೀಯಕ್ಕೆ ಬರಲು ಆದಿಚುಂಚನಗಿರಿ ಶ್ರೀ ಕಾರಣ: ಶಾಸಕ ಝಮೀರ್ ಅಹ್ಮದ್ ಖಾನ್

Update: 2022-07-25 14:21 GMT

ಹಾವೇರಿ, ಜು.25: ‘ನಾನು ರಾಜಕೀಯಕ್ಕೆ ಬರಲು ಮುಸ್ಲಿಮ್ ಧಾರ್ಮಿಕ ಗುರುಗಳು ಅಲ್ಲ, ಒಕ್ಕಲಿಗ ಸಮಾಜದ ಗುರುಗಳು ಕಾರಣ. ಆದಿಚುಂಚನಗಿರಿ ಶ್ರೀಗಳ ಆದೇಶದ ಹಿನ್ನೆಲೆಯಲ್ಲಿ ನಾನು ಜೆಡಿಎಸ್ ಪಕ್ಷ ಸೇರ್ಪಡೆಯಾಗಿ ರಾಜಕೀಯಕ್ಕೆ ಕಾಲಿರಿಸಿದೆ' ಎಂದು ಕಾಂಗ್ರೆಸ್ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಹೇಳಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲಗಂಗಾಧರನಾಥ ಸ್ವಾಮೀಜಿ ಆದಿಚುಂಚನಗಿರಿಯಿಂದ ವಿಜಯನಗರದಲ್ಲಿರುವ ಶಾಖಾ ಮಠಕ್ಕೆ ಬರುವಾಗ ಮಾರ್ಗ ಮಧ್ಯೆಯೆ ನನಗೆ ಕರೆ ಮಾಡಿ, ಮಠಕ್ಕೆ ಬರ ಮಾಡಿಕೊಳ್ಳುತ್ತಿದ್ದರು. ಬೆಳಗ್ಗೆಯಿಂದ ಸಂಜೆ ವರೆಗೆ ನಾನು ಒಕ್ಕಲಿಗರ ಮಠದಲ್ಲಿ ಬೆಳೆದಿದ್ದೇನೆ. ರಾಜಕೀಯಕ್ಕೆ ಬರಲು ಅವರು ದಾರಿ ತೋರಿಸಿದರು ಎಂದರು.

ಆದಿಚುಂಚನಗಿರಿಯಲ್ಲಿರುವ ಮಠ ಹಾಗೂ ವಿಜಯನಗರದಲ್ಲಿರುವ ಶಾಖಾ ಮಠದಲ್ಲಿ ಸುಮಾರು ಜನ ಇದ್ದಾರೆ. ಸ್ವಾಮೀಜಿ ಹಾಗೂ ಒಕ್ಕಲಿಗರೊಂದಿಗೆ ನನ್ನ ಸಂಬಂಧ ಏನು ಅನ್ನೋದನ್ನು ಮಠದಲ್ಲಿ ಹೋಗಿ ಕೇಳಿ ಹೇಳುತ್ತಾರೆ ಎಂದು ತಮ್ಮನ್ನು ಒಕ್ಕಲಿಗರ ವಿರೋಧಿ ಎಂಬ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸುತ್ತಿರುವ ತಮ್ಮ ವಿರೋಧಿಗಳಿಗೆ ಝಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದರು.

ಪ್ರತಿಯೊಬ್ಬ ರಾಜಕಾರಣಿಗೆ ಯಾರಾದರೂ ಒಬ್ಬ ಗುರು ಇರುತ್ತಾರೆ. ನಾನು ಇವತ್ತು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ಆದರೆ, ನನ್ನ ರಾಜಕೀಯ ಗುರು ಎಚ್.ಡಿ.ದೇವೇಗೌಡರು. 2005ರಲ್ಲಿ ಅವರು ನನ್ನನ್ನು ಚಾಮರಾಜಪೇಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲಿಸಿದ್ದರಿಂದ ಇವತ್ತು ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ನಾನು ಅವರನ್ನು ಮರೆಯಲು ಆಗುವುದಿಲ್ಲ ಎಂದು ಅವರು ಹೇಳಿದರು.

ಸಚಿವ ಆರ್.ಅಶೋಕ್ ಅವರಿಗೆ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇಲ್ಲವೇ? ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ಆಸೆ ಇಲ್ಲವೇ? ಅವರವರಲ್ಲೆ ಅಧಿಕಾರಕ್ಕಾಗಿ ಸ್ಪರ್ಧೆ ಇದೆ. ಸಿ.ಟಿ.ರವಿಗೆ ಹೇಳಿಕೊಳ್ಳಲು ಬೇರೆ ವಿಷಯಗಳು ಇಲ್ಲ. ಅವರಿಗೆ, ಹಿಂದೂ, ಮುಸ್ಲಿಮರು ಯಾರೂ ಬೇಕಾಗಿಲ್ಲ. ಕೇವಲ ಖುರ್ಚಿ ಮತ್ತು ಅಧಿಕಾರ ಮಾತ್ರ ಬೇಕು ಎಂದು ಝಮೀರ್ ಅಹ್ಮದ್ ಖಾನ್ ಕಿಡಿಗಾರಿದರು.

ನಮ್ಮದು ಹೈಕಮಾಂಡ್ ಪಕ್ಷ, ಯಾರು ಮುಖ್ಯಮಂತ್ರಿ ಆಗಬೇಕು ಎಂಬುದನ್ನು ಸೋನಿಯಾಗಾಂಧಿ, ರಾಹುಲ್ ಗಾಂಧಿ ತೀರ್ಮಾನ ಮಾಡುತ್ತಾರೆ. ನಾನು ನನ್ನ ವೈಯಕ್ತಿಕ ಅಭಿಪ್ರಾಯವನ್ನು ನಿನ್ನೆ, ಮೊನ್ನೆ ಹೇಳಿದ್ದೇನೆ. ಹೈಕಮಾಂಡ್ ಹಾಕಿದ ಗೆರೆಯನ್ನು ನಾವು ದಾಟುವಂತಿಲ್ಲ. ಸಿದ್ದರಾಮಯ್ಯನವರ 75ನೆ ಹುಟ್ಟುಹಬ್ಬದ ಮಾದರಿಯಲ್ಲಿ ನಮ್ಮ ಪಕ್ಷದ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಮಾಡುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News