ಚಾಮರಾಜನಗರ: 20 ವರ್ಷಗಳ ಹಿಂದೆಯೇ ತನಗಾಗಿ ಸಮಾಧಿ ನಿರ್ಮಿಸಿಕೊಂಡಿದ್ದ ವ್ಯಕ್ತಿ ನಿಧನ

Update: 2022-07-25 17:24 GMT

ಚಾಮರಾಜನಗರ, ಜು.25: ವ್ಯಕ್ತಿ ಮೃತಪಟ್ಟ ಬಳಿಕ ಸಮಾಧಿ ನಿರ್ಮಾಣ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ತಾವು ಯಾರಿಗೂ ತೊಂದರೆ ಕೊಡಬಾರದು, ತಾವು ದುಡಿದ ಹಣದಲ್ಲೇ ತನ್ನ ಅಂತಿಮ ವಿಧಿ - ವಿಧಾನ ನೆರವೇರಬೇಕು ಎಂದು ಇಚ್ಛಿಸಿ 20 ವರ್ಷಗಳ ಹಿಂದೆಯೇ ಸಮಾಧಿ ನಿರ್ಮಿಸಿಕೊಂಡಿದ್ದು, ರವಿವಾರ ರಾತ್ರಿ ನಿಧನ ಹೊಂದಿದ್ದಾರೆ.  ಅವರ ಕುಟುಂಬದ ಸದಸ್ಯರು ಅದೇ ಸಮಾಧಿಯಲ್ಲಿ ಸೋಮವಾರ  ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. 

ಪುಟ್ಟನಂಜಪ್ಪ ಎಂಬವರು 20 ವರ್ಷಗಳ ಹಿಂದೆಯೇ ತಮ್ಮ ಜಮೀನಿನಲ್ಲಿ ತಾವೇ ಕುಳಿತು ಅಳತೆ ಮಾಡಿ ಗೋಪುರ ಶೈಲಿಯ ಸಮಾಧಿಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಜೊತೆಗೆ, ಅಂತ್ಯ ಸಂಸ್ಕಾರಕ್ಕೆ ಬೇಕಾದ ವಿಭೂತಿ, ಕಳಶಗಳು, ಒಂದು ಲಕ್ಷ ಹಣವನ್ನೂ ಎತ್ತಿಟ್ಟಿದ್ದು ಆ ಹಣದಲ್ಲೇ ಅಂತ್ಯಕ್ರಿಯೆ ನೆರವೇರಿದೆ. 

ಪುಟ್ಟಮಲ್ಲಪ್ಪ ಅವರ ಪತ್ನಿ ಕಳೆದ ವರ್ಷ ಕೊರೋನದಲ್ಲಿ ಮೃತಪಟ್ಟಿದ್ದು, ಅವರ ಅಂತ್ಯ ಸಂಸ್ಕಾರವನ್ನು ಮಕ್ಕಳಿಂದ ಹಣ ಪಡೆಯದೇ ತಾವೇ ನೆರವೇರಿಸಿದ್ದರು‌. ಅಂತ್ಯ ಸಂಸ್ಕಾರಕ್ಕೆ ಬೇಕಾದ ಪ್ರತಿಯೊಂದನ್ನು ತಂದಿಟ್ಟಿದ್ದರು. ಕಳೆದ 12 ದಿನಗಳಿಂದ ಅವರ ಆರೋಗ್ಯ ಹದಗೆಟ್ಟು 5 ದಿನಗಳಿಂದ ಮಾತು ನಿಂತಿತ್ತು, ರವಿವಾರ ಸಂಜೆ ತಂದೆಯವರು ಅಸುನೀಗಿದ್ದು, ಇಂದು ಅವರು ನಿರ್ಮಿಸಿಕೊಂಡ ಸಮಾಧಿಯಲ್ಲೇ, ಅವರು ಎತ್ತಿಟ್ಟಿದ್ದ ಹಣದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಪುಟ್ಟನಂಜಪ್ಪ ಅವರ ಪುತ್ರ ಗೌಡಿಕೆ ನಾಗೇಶ್‌ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News