ಬಿಎಸ್ ವೈ ತಮ್ಮ ಪುತ್ರ ವಿಜಯೇಂದ್ರಗೆ ಟಿಕೆಟ್ ಕೇಳಿರುವುದರಲ್ಲಿ ತಪ್ಪೇನಿಲ್ಲ: ಎಚ್.ವಿಶ್ವನಾಥ್

Update: 2022-07-25 15:21 GMT

ಮೈಸೂರು,ಜು.25: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸತತ ಎಂಟು ಬಾರಿ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಈಗ ತಮ್ಮ  ಪುತ್ರ ವಿಜಯೇಂದ್ರಗೆ ಟಿಕೆಟ್ ಕೇಳಿರುವುದರಲ್ಲಿ ತಪ್ಪೇನಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆ ಮಂದಿಯೆಲ್ಲಾ ರಾಜಕಾರಣದಲ್ಲಿದ್ದಾರೆ. ಅದನ್ನೇಕೆ ಯಾರು ಪ್ರಶ್ನಿಸುವುದಿಲ್ಲ. ಸತತ ಎಂಟು ಬಾರಿ ಪ್ರತಿನಿಧಿಸಿರುವ ಶಿಕಾರಿಪುರ ಕ್ಷೇತ್ರದಲ್ಲಿ ಪುತ್ರ ವಿಜಯೇಂದ್ರಗೆ ಯಡಿಯೂರಪ್ಪ ಟಿಕೆಟ್ ಕೇಳಿರುವುದರಲ್ಲಿ ತಪ್ಪೇನಿಲ್ಲ. ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಊಯಿಸಿಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಬಿಜೆಪಿ ನೆಲೆಯೂರಲು ಯಡಿಯೂರಪ್ಪ ಕೊಡುಗೆ ಅಪಾರವಾಗಿದೆ. ಯಡಿಯೂರಪ್ಪ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಕೂಡ ಪಕ್ಷಕ್ಕೆ ಅವರ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ. ಹೀಗಾಗಿ ಯಡಿಯೂರಪ್ಪ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯಬೇಕು' ಎಂದರು.

'ಸಿದ್ದರಾಮಯ್ಯ ಅಮೃತಮಹೋತ್ಸವದ ಅಗತ್ಯವಿರಲಿಲ್ಲ, ಕಾಂಗ್ರೆಸ್ಸಿನ ಉತ್ಸವ ನಡೆಯಬೇಕಿತ್ತು. ಮೊನ್ನೆ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಾರೊಬ್ಬರೂ ಕಾಂಗ್ರೆಸ್ ಬಗ್ಗೆ ಮಾತನಾಡಲಿಲ್ಲ. ಸ್ವತಃ ಸಿದ್ದರಾಮಯ್ಯ ಕೂಡ ಕಾಂಗ್ರೆಸ್ ಹೆಸರೇಳಲಿಲ್ಲ. ಬರೀ ಸಿದ್ದರಾಮಯ್ಯ ಪುಂಗಿ ಊದಿದರೇ, ಕಾಂಗ್ರೆಸ್ ಪುಂಗಿ ಊದುವವರು ಯಾರು?' ಎಂದು ಲೇವಡಿ ಮಾಡಿದರು.

'ಜಾತಿ ರಾಜಕಾರಣ ಅತಿಯಾದರೆ ಒಳ್ಳೆಯದಲ್ಲ. ಪ್ರತಿಯೊಬ್ಬರೂ ತಮ್ಮ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಲು ಜಾತಿ ರಾಜಕಾರಣ ಮಾಡುವ ಅವಶ್ಯವಿದೆ. ಆದರೆ ಜಾತಿ ರಾಜಕಾರಣ ಅತಿಯಾಗಬಾರದು. ಎಲ್ಲಾ ಜಾತಿಗಳು, ಧರ್ಮೀಯರು ಬೆಂಬಲಿಸಿದರೆ ಮಾತ್ರ ರಾಜಕಾರಣ ಮಾಡಲು, ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಕಾಂಗ್ರೆಸ್ ನಲ್ಲಿ ಒಕ್ಕಲಿಗ ವರ್ಸಸ್ ಅಲ್ಪಸಂಖ್ಯಾತ ರಾಜಕಾರಣ ಮುನ್ನೆಲೆಗೆ ಬಂದಿರುವುದು ಒಳ್ಳೆಯ ಬೆಳವಣಿಗೆಯಲ್ಲ' ಎಂದು ಟೀಕಿಸಿದರು.

'ಎಚ್ ವಿಶ್ಚನಾಥ್ ಪುತ್ರ ಅಮಿತ್ ದೇವರಹಟ್ಟಿ ಸಿದ್ಧರಾಮಯ್ಯ ಅಮೃತ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿರುವ ವಿಚಾರ ಕುರಿತು ಮಾತನಾಡಿದ ಎಚ್.ವಿಶ್ವನಾಥ್, ಅದು ಆತನ ವೈಯಕ್ತಿಕ ನಿರ್ಧಾರ. ಅವನಿಗೂ 42 ವರ್ಷ ಆಗಿದೆ, ಡಿಸಿಸಿ ಬ್ಯಾಂಕ್ ಡೈರೆಕ್ಟರ್ ಆಗಿದ್ದಾನೆ. ಅವನಿಗೂ ಸ್ವಂತ ನಿರ್ಧಾರ ಕೈಗೊಳ್ಳುವ ಶಕ್ತಿಯಿದೆ. ಹಾಗಾಗಿ ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆಯ ಅಗತ್ಯವಿಲ್ಲ' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News