ಶಿವಮೊಗ್ಗ | ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಕಾಂಗ್ರೆಸ್ ಸಿದ್ಧತೆ: ಪೂರ್ವಭಾವಿ ಸಭೆ

Update: 2022-07-25 16:22 GMT

ಶಿವಮೊಗ್ಗ, ಜು.25: ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿಗಾಗಿ ತೀರ್ಥಹಳ್ಳಿಯಲ್ಲಿ ನಡೆಯುವ ಬೃಹತ್ ಪಾದಯಾತ್ರೆಗೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾಗೃತಿ ಸಮಾವೇಶಕ್ಕೆ ಮೆರಗು ನೀಡಬೇಕು ಎಂದು ಕೆಪಿಸಿಸಿ ಸಹಕಾರಿ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥಗೌಡ ಮನವಿ ಮಾಡಿದರು.

ಸೋಮವಾರ ಗಾಜನೂರಿನಲ್ಲಿ ನಡೆದ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮಾಜಕ್ಕಾಗಿ ಹೋರಾಡಿದವರ ನೆನಪು ಮಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಮುಖ್ಯವಾಗಿ ಯುವ ಪೀಳಿಗೆಗೆ ಇದನ್ನು ನೆನಪಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಜು. 28 ರಂದು ಬೆಳಗ್ಗೆ 8 ಗಂಟೆಗೆ ಹಾರೋಗುಳಿಗೆ ಗ್ರಾಮದ ಕಡಿದಾಳ್ ಮಂಜಪ್ಪನವರ ಸಮಾಧಿ ಸ್ಥಳದಿಂದ ತೀರ್ಥಹಳ್ಳಿ ತಾಲೂಕು ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷವಾಗಿದೆ. ನಮಗೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಈ ಅಮೃತ ವರ್ಷದ ಸವಿನೆನಪಿನಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ನೆನಪು ಮಾಡಿಕೊಳ್ಳುವುದು ಕರ್ತವ್ಯಕೂಡ ಆಗಿದೆ. ತೀರ್ಥಹಳ್ಳಿಯಲ್ಲಿ ಶಾಂತವೇರಿ ಗೋಪಾಲಗೌಡು, ಕಡಿದಾಳ್ ಮಂಜಪ್ಪನವರು, ಶೇಷಪ್ಪ ಹೆಗ್ಗಡೆ, ದೇವಂಗಿ ಮಾನಪ್ಪ ಮುಂತಾದವರು ಮೇರು ವ್ಯಕ್ತಿತ್ವವುಳ್ಳವರು. ಕಡಿದಾಳ್ ಮಂಜಪ್ಪನವರು ಮುಖ್ಯಮಂತ್ರಿಯಾಗಿದ್ದವರು. ಇಂತಹ ಸಮಾಜವಾದಿಗಳ ಸೇವೆಯಿಂದ ತೀರ್ಥಹಳ್ಳಿಯ ಘನತೆ ಹೆಚ್ಚಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಶಂಕರಘಟ್ಟ ಮಾತನಾಡಿ, ಸ್ವಾತಂತ್ರ್ಯದ ಬಳಿಕ ದೇಶವನ್ನು ಬಲಾಢ್ಯವಾಗಿ ಕಾಂಗ್ರೆಸ್ ಪಕ್ಷ ಕಟ್ಟಿದೆ. ಅಂಬೇಡ್ಕರ್ ಸಂವಿಧಾನ ರಚಿಸಿದರೆ, ವಲ್ಲಭ ಬಾಯ್ ಪಟೇಲ್ ದೇಶವನ್ನು ಒಂದುಗೂಡಿಸಿದವರು. ಹತ್ತಾರು ಧರ್ಮಗಳು ಇಲ್ಲಿವೆ. ಇದು ಸಾಮರಸ್ಯಗಳ ಬೀಡಾಗಿದೆ. ಎಲ್ಲಾ ಹೋರಾಟಗಳ ನೆನಪು ಮಾಡಿಕೊಳ್ಳುವುದು ಪ್ರಸ್ತುತವಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಸಹಕಾರಿ ವಿಭಾಗದ ಅಧ್ಯಕ್ಷ ಜಗದೀಶ್ ಗೌಡ, ಪ್ರಮುಖರಾದ ರಾಘವೇಂದ್ರ, ನೂರ್ ಅಹಮ್ಮದ್, ಶಿವಕುಮಾರ್, ಮಲ್ಲಿಕಾರ್ಜುನ್, ಅಕ್ರಂ, ಸಲೀಂ ಖಾನ್ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News