ಸರಕಾರಿ ಭೂಮಿ ಬಿಜೆಪಿ ಅಧ್ಯಕ್ಷರ ಹೆಸರಿಗೆ ಮಾಡುವಂತೆ ಮನವಿ: ಬಿ.ಕೆ.ಹರಿಪ್ರಸಾದ್ ಕಿಡಿ

Update: 2022-07-26 14:15 GMT

ಬೆಂಗಳೂರು, ಜು.26: ರಾಜ್ಯ ಸರಕಾರದಿಂದ ಮಂಜೂರಾಗಿರುವ ಭೂಮಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ಮಾಡಿಕೊಡುವಂತೆ ಶಿವಮೊಗ್ಗ ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ.ಮೇಘರಾಜ್ ಎಂಬವರು ಬರೆದಿರುವ ಪತ್ರವನ್ನು ಉಲ್ಲೇಖಿಸಿ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಬಿಜೆಪಿ ವಿರುದ್ಧ ಕಿಡಿಗಾರಿದ್ದಾರೆ.

‘ಅವರು ಎಷ್ಟು ಲಜ್ಜೆಗೆಟ್ಟವರಾಗಿರಬಹುದು. ಸಂಸ್ಥೆಗೆ ಮಂಜೂರಾದ ಭೂಮಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೆಸರಿಗೆ ನೋಂದಣಿ ಮಾಡಿಸಲು ಕೋರಲಾಗಿದೆ. ಬಿಜೆಪಿ ಮತ್ತು ಆರೆಸೆಸ್ಸ್ ದೇಶದಾದ್ಯಂತ ಇದೇ ಮಾದರಿಯಲ್ಲಿ ಬಡವರ ದೊಡ್ಡ ಭೂಮಿಯನ್ನು ಕಬಳಿಸುತ್ತಿವೆ. ಬಿಜೆಪಿಯ ಇಂತಹ ದುಷ್ಟ ಭ್ರಷ್ಟ ಆಚರಣೆಯನ್ನು ನಾನು ಖಂಡಿಸುತ್ತೇನೆ ಎಂದು ಹರಿಪ್ರಸಾದ್ ಟ್ವೀಟ್ ಮಾಡಿದ್ದಾರೆ.

'ಬಿಜೆಪಿ ಕಚೇರಿಗಳನ್ನ ಸರ್ಕಾರಿ ಜಾಗದಲ್ಲಿ ಕಟ್ಟಲು ಅದೇನು ಪಿತ್ರಾರ್ಜಿತ ಆಸ್ತಿಯಲ್ಲ..! ಮುಧೋಳದಲ್ಲಿ ಪರಿಶಿಷ್ಟ ವಿದ್ಯಾರ್ಥಿ ನಿಲಯ ಕಟ್ಟಲು ಮೀಸಲಿಟ್ಟ ಜಾಗ ಹಾಗೂ ಶಿವಮೊಗ್ಗದ ನೀರಾವರಿ ನಿಗಮದ 2ಎಕರೆ ಭೂಮಿ ಬಿಜೆಪಿ ಕಚೇರಿಗಳನ್ನ ಕಟ್ಟಲು ಅಕ್ರಮವಾಗಿ ಅನುಮೋದನೆ ನೀಡಲಾಗಿದೆ. ಸರ್ಕಾರಿ ನಿವೇಶನಗಳು ಯಾರಪ್ಪನ ಆಸ್ತಿ.? ಎಂದು ಪ್ರಶ್ನೆ ಮಾಡಿದ್ದಾರೆ. 

ಶಿವಮೊಗ್ಗ ನಗರದ ಸಾಗರ ರಸ್ತೆಗೆ(ಎನ್.ಎಚ್-206) ಅಭಿಮುಖವಾಗಿರುವ ಆಲ್ಕೋಳ ಗ್ರಾಮದ ಸರ್ವೆ ನಂ.36 ಮತ್ತು 37ರಲ್ಲಿ ರಾಜ್ಯ ಸರಕಾರವು ಸುಮಾರು 2 ಎಕರೆ ಜಾಗವನ್ನು ಅಧ್ಯಯನ, ಸಂಶೋಧನೆ ಮತ್ತು ಪ್ರಶಿಕ್ಷಣ ಕೇಂದ್ರಕ್ಕೆ ಮಂಜೂರು ಮಾಡಿದೆ. ಈ ಜಾಗವನ್ನು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ಮಾಡಿಕೊಡುವಂತೆ ರಾಜ್ಯ ನೀರಾವರಿ ನಿಗಮ ನಿಯಮಿತ(ಕೆ.ಎನ್.ಎನ್.ಎಲ್)ದ ವ್ಯವಸ್ಥಾಪಕ ನಿರ್ದೇಶಕರಿಗೆ ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಕಳೆದ ಮೇ 20ರಂದು ಬರೆದಿರುವ ಪತ್ರವನ್ನು ಉಲ್ಲೇಖಿಸಿ ಹರಿಪ್ರಸಾದ್ ಟ್ವಿಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News