ಚುನಾವಣಾ ವರ್ಷವು ಹಿಂಸಾ ವರ್ಷವಾಗದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ: ಎಚ್.ಸಿ ಮಹದೇವಪ್ಪ

Update: 2022-07-27 11:15 GMT

ಬೆಂಗಳೂರು: 'ಚುನಾವಣಾ ವರ್ಷದಲ್ಲಿ ಮಾತ್ರ ಅತಿ ಹೆಚ್ಚು ಜರುಗುವ ಬಡ ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತ ಯುವಕರ ಸಾವು ನೋವುಗಳಿಗೆ ಮನಸ್ಸು ಕಂಪಿಸುತ್ತದೆ. ಹೀಗಾಗಿ ಚುನಾವಣಾ ವರ್ಷವು ಹಿಂಸಾ ವರ್ಷವಾಗದಂತೆ ತಡೆಯುವ ಜವಾಬ್ದಾರಿ ಸಂವಿಧಾನವನ್ನು ಗೌರವಿಸುವ ನಮ್ಮೆಲ್ಲರ ಮೇಲಿದೆ' ಎಂದು ಮಾಜಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಹೇಳಿದ್ದಾರೆ.

ಈ ಕುರಿತ ಸರಣಿ  ಟ್ವೀಟ್ ಮಾಡಿರುವ ಅವರು,  'ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಯುವಕ ಪ್ರವೀಣ್ ಹತ್ಯೆಯು ಚುನಾವಣಾ ವರ್ಷದ ಭೀಕರತೆಯನ್ನು ಸೂಚಿಸುತ್ತಿದ್ದು ಈ ಹಿಂಸಾಚಾರವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಜೊತೆಗೆ ಚುನಾವಣಾ ವರ್ಷದ ಹತ್ಯೆಗಳ ಹಿಂದಿನ ಕಾರಣಗಳನ್ನು ಅರಿತು ಪ್ರಚೋದನೆಗೆ ಒಳಗಾಗದೇ ನಮ್ಮ ಯುವಕರು ಕೂಡಲೇ ಜಾಗೃತರಾಗಬೇಕು ಎಂದು ವಿನಂತಿಸುತ್ತೇನೆ' ಎಂದು ಮನವಿ ಮಾಡಿಕೊಂಡಿದ್ದಾರೆ.

'ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರಗಳನ್ನು ತಡೆಯಲು ಮತ್ತೆ ಮತ್ತೆ ವಿಫಲವಾಗುತ್ತಿರುವ ಗೃಹ ಸಚಿವ ಆರಗ ಜ್ಞಾನೇದ್ರ ಅವರು ಕೂಡಲೇ ರಾಜೀನಾಮೆಯನ್ನು ನೀಡಬೇಕು' ಎಂದು ಎಚ್.ಸಿ ಮಹದೇವಪ್ಪ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News