ನೀತಿ ಅನ್ವಯ ಕ್ರಮಕ್ಕೆ ಮುಂದಾದಾಗ ನ್ಯಾಯಾಲಯದ ಮಧ್ಯಪ್ರವೇಶವು ಸೀಮಿತವಾಗಿರಬೇಕು: ಹೈಕೋರ್ಟ್
ಬೆಂಗಳೂರು, ಜು.27: ಉತ್ತರ ಕರ್ನಾಟಕ ಜನರ ಹಿತ ಕಾಪಾಡುವುದಕ್ಕಾಗಿ ಕೃಷ್ಣ ಮೇಲ್ದಂಡೆ ಯೋಜನೆ(ಯುಕೆಪಿ) ಜಾರಿಗಾಗಿ ಭೂಮಿ ವಶಪಡಿಸಿಕೊಂಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನೀತಿಯ ಅನ್ವಯ ಸರಕಾರವು ಕ್ರಮಕ್ಕೆ ಮುಂದಾದಾಗ ನ್ಯಾಯಾಲಯದ ಮಧ್ಯಪ್ರವೇಶವು ಸೀಮಿತ ವ್ಯಾಪ್ತಿಯಲ್ಲಿ ಇರಬೇಕು ಹಾಗೂ ನ್ಯಾಯಿಕ ಪರಿಶೀಲನೆಯ ನೆಪದಲ್ಲಿ ಕೋರ್ಟ್‍ಗಳು ಸರಕಾರ ನಡೆಸುವಂತಾಗಬಾರದು ಎಂದು ಹೈಕೋರ್ಟ್ ಹೇಳಿದೆ.
ಪ್ರವಾಹದ ಹಿನ್ನೆಲೆಯಲ್ಲಿ ನಿರಾಶ್ರಿತರಾಗುವ ಜನರಿಗೆ ಪುನರ್ವಸತಿ ಕಲ್ಪಿಸಲು ಟೌನ್‍ಶಿಪ್ ನಿರ್ಮಾಣಕ್ಕಾಗಿ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಬಾಗಲಕೋಟೆ ಜಿಲ್ಲೆಯ ಗೋಪಾಲ್ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆ ನ್ಯಾ.ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ತಜ್ಞರ ವರದಿ ಆಧರಿಸಿ ಸರಕಾರವು ರೂಪಿಸಿದ ನೀತಿಯ ಅನ್ವಯ ಕ್ರಮಕ್ಕೆ ಮುಂದಾದಾಗ ನ್ಯಾಯಪೀಠವು ಹಣಕಾಸು ತಜ್ಞರ ರೀತಿಯಲ್ಲಿ ನಡೆದುಕೊಳ್ಳಬಾರದು. ಆಡಳಿತ ನಡೆಸುವುದು ಸರಕಾರದ ಕರ್ತವ್ಯವಾಗಿದ್ದು, ನ್ಯಾಯಿಕ ಪರಿಶೀಲನೆಯ ನೆಪದಲ್ಲಿ ಕೋರ್ಟ್‍ಗಳು ಸರಕಾರ ನಡೆಸುವಂತಾಗಬಾರದು ಎಂದು ಹೈಕೋರ್ಟ್ ಹೇಳಿದೆ.
ದಶಕದ ಹಿಂದೆ ಕೃಷ್ಣ ಜಲ ವಿವಾದ ನ್ಯಾಯಮಂಡಳಿಯು ಆಲಮಟ್ಟಿ ಜಲಾಶಯದ ಮಟ್ಟವನ್ನು ಹೆಚ್ಚಿಸಲು ಸಲಹೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಉ-ಕ ಭಾಗದ ವ್ಯಾಪಕ ಭೂಮಿ ಮುಳುಗಡೆಯಾಗಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಭೂಮಿ ಸ್ವಾಧೀನ ಮಾಡಿಕೊಳ್ಳುವುದು ಪ್ರಭಾವಿಗಳ ಯತ್ನವಾಗಿದೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಸೂಕ್ತ ದಾಖಲೆಗಳು ಇಲ್ಲ. ಹೀಗಾಗಿ, ಇದು ಕಾನೂನಿಗೆ ವಿರುದ್ಧವಾಗಿದೆ ಎನ್ನಲಾಗದು ಎಂದು ಆದೇಶದಲ್ಲಿ ಪೀಠವು ತಿಳಿಸಿದೆ. ಅರ್ಜಿಯನ್ನು ವಜಾಗೊಳಿಸಿದೆ.