ರೈತರಲ್ಲಿ ಭರವಸೆ ಮೂಡಿಸಿದ ರೈತ ವಿದ್ಯಾನಿಧಿ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-07-28 11:10 GMT

ಬೆಂಗಳೂರು, ಜುಲೈ 28:  ದೇಶದಲ್ಲಿಯೇ ಮೊದಲ ಬಾರಿಗೆ ಪ್ರಾರಂಭಿಸಿದ ರೈತ ವಿದ್ಯಾನಿಧಿ ಯೋಜನೆಯಡಿ ರೈತ ವಿದ್ಯಾನಿಧಿಯಿಂದ ಕಳೆದ ವರ್ಷ 8.50 ಲಕ್ಷ ಹಾಗೂ ಈ ವರ್ಷ 9.8 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ.

ಒಂದು ವರ್ಷದ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪ್ರತಿ ದಿನವೂ ಕೂಡ 15-20 ಸಾವಿರ ಮಕ್ಕಳಿಗೆ  ಡಿಬಿಟಿ ಮೂಲಕ ತಲುಪಿದೆ. ರೈತರ ಕುಟುಂಬಗಳಲ್ಲಿ  ಅವರ ಮಕ್ಕಳ ವಿದ್ಯಾಭ್ಯಾಸ ಮಾಡುತ್ತಿರುವುದಕ್ಕೆ ರೈತರಲ್ಲಿ ಭರವಸೆ ಮೂಡಿದೆ ಎಂದರು.

ಬಡವರಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಶಾಸನ ಮೊತ್ತ ಹೆಚ್ಚಳವಾಗಿದ್ದು, ಹೆಚ್ಚಿನ ಆರ್ಥಿಕ ನೆರವು , ಆಸರೆಯನ್ನು ಬಡವರಿಗೆ, ಅಂಗವಿಕಲರಿಗೆ ನೀಡಲಾಗಿದೆ.  ಎಸ್.ಸಿ/ಎಸ್.ಟಿ ಸಮುದಾಯಕ್ಕೆ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯಲ್ಲಿ ಅನುದಾನವನ್ನು ಹಚ್ಚಿಸಲಾಗಿದೆ.  ಎಸ್.ಸಿ/ ಎಸ್.ಟಿ., ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ವಿವಿಧ ನಿಗಮಗಳಿಗೆ ಬಜೆಟ್ ನಲ್ಲಿ ನೀಡಿರುವ ಮೊತ್ತಕ್ಕೆ ಹೆಚ್ಚುವರಿಯಾಗಿ 800 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ವಿಶೇಷವಾಗಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದಸುಮಾರು 25 ಲಕ್ಷ ಕ್ಕಿಂತ ಹೆಚ್ಚು ಬಡ ಕುಟುಂಬಗಳಿಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದಕ್ಕೆ ವಾರ್ಷಿಕ 700 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಲಾಗುತ್ತಿದೆ ಎಂದು ತಿಳಿಸಿದರು. 

ವಸತಿನಿಲಯಗಳ ಭೋಜನ ವೆಚ್ಚ ಹಾಗೂ  ವಿದ್ಯಾರ್ಥಿವೇತನದ ಮೊತ್ತ ಹೆಚ್ಚಿಸಲಾಗಿದೆ. 100 ಎಸ್.ಸಿ/ಎಸ್.ಟಿ ವಿದ್ಯಾರ್ಥಿನಿಲಯಗಳನ್ನು ನಿರ್ಮಿಸಲಾಗುತ್ತಿದೆ. 50 ಒಬಿಸಿ ಹಾಸ್ಟೆಲ್ಗಳು ಹಾಗೂ ಐದು ನಗರಗಳಲ್ಲಿ 1000 ವಿದ್ಯಾರ್ಥಿಗಳಿಗೆ  ವಸತಿ ಕಲ್ಪಿಸುವ ಬೃಹತ್ ಹಾಸ್ಟಲ್ ಗಳನ್ನು  ಹುಬ್ಬಳ್ಳಿ- ಧಾರವಾಡ, ಬೆಂಗಳೂರು, ಗುಲ್ಬರ್ಗಾ, ಮೈಸೂರು, ಮಂಗಳೂರಿನಲ್ಲಿ ನಿರ್ಮಿಸಲಾಗುತ್ತಿದೆ ಎಂದು ನುಡಿದರು.

ಇದರೊಂದಿಗೆ  ಮನೆ  ನಿರ್ಮಾಣಕ್ಕೆ ನೀಡುವ ಅನುದಾನವನ್ನು 75 ಸಾವಿರದಿಂದ 1 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿದೆ. ಭೂಚೇತನ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸುಮಾರು 3500 ಹೆಕ್ಟೇರ್ ಜಮೀನು  ಖರೀದಿ ಮಾಡಲಾಗಿದೆ.  ಮನೆ ಖರೀದಿ ಮಾಡುವ ದರವನ್ನೂ ಸಹ ಹೆಚ್ಚಿಸಲಾಗಿದೆ. ರೂ.  1.75 ಲಕ್ಷ  ಇದ್ದ ಮೊತ್ತವನ್ನು ರೂ.  2 ಲಕ್ಷಕ್ಕೆ ಏರಿಸಲಾಗಿದೆ ಎಂದು ತಿಳಿಸಿದರು.

 ಸ್ತ್ರೀ ಶಕ್ತಿ ಸಂಘಗಳ ಬಲವರ್ಧನೆಗೆ ವಿಶೇಷವಾದ  ಯೋಜನೆಯನ್ನು ಪ್ರಥಮಬಾರಿ ರಾಜ್ಯದಲ್ಲಿ ರೂಪಿಸಲಾಗಿದೆ. ಉದ್ಯೋಗ ದೊರಕಿಸಲು, 1.50 ಲಕ್ಷ  ಬೀಜ ಧನವನ್ನ ನೀಡಿ, ಆಂಕರ್ ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅವರಿಗೆ ಸಾಲ ಖಾತ್ರಿಯಾಗಿ ಸಿಗುವ ವ್ಯವಸ್ಥೆ ಮಾಡಿ, ವಿವಿಧ ಕಸುಬುಗಳಲ್ಲಿ ತರಬೇತಿ ನೀಡಿ ಅವರು ಉತ್ಪಾದಿಸುವ  ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ವಿವಿಧ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.   ಪ್ರಥಮ ಬಾರಿಗೆ ಸ್ತ್ರೀ ಶಕ್ತಿ ಸಂಘಗಳಿಗೆ  ಉತ್ಪಾದನೆಗೆ ಸಹಾಯ ಮಾಡುವುದಲ್ಲದೆ ಮಾರುಕಟ್ಟೆ ಒದಗಿಸುವ ಎಂಡ್ -ಟು-ಎಂಡ್ ಅಪ್ರೋಚ್ ಮೂಲಕ  5 ಲಕ್ಷ ಸ್ತ್ರೀಯರಿಗೆ ಸ್ವಯಂ ಉದ್ಯೋಗ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ನುಡಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಒಪ್ಪಿ, ಅನುಷ್ಠಾನ ಮಾಡುತ್ತಿರುವ ರಾಜ್ಯ ನಮ್ಮದು. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ವಲಯದಲ್ಲಿ  ಮೂಲಸೌಕರ್ಯಗಳನ್ನು ಹೆಚ್ಚಿಸಲಾಗಿದೆ. ನಮ್ಮ ಸರ್ಕಾರ  750 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ತಲಾ 20 ಲಕ್ಷ ರೂ.ಗಳನ್ನು ಒದಗಿಸಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News