ಪ್ರವೀಣ್ ಹತ್ಯೆ ಹಿಂದೆ ಪಿಎಫ್‍ಐ ಕೈವಾಡ ಶಂಕೆ: ನಳಿನ್ ಕುಮಾರ್ ಕಟೀಲ್

Update: 2022-07-28 11:38 GMT

ಬೆಂಗಳೂರು, ಜು. 28: ‘ಬಿಜೆಪಿ ಯುವ ಮೋರ್ಚಾದ ಜವಾಬ್ದಾರಿ ಹೊತ್ತ, ಸರಳ ಸಜ್ಜನಿಕೆಯ ಪ್ರವೀಣ್ ಹತ್ಯೆಯಾಗಿದೆ. ಹತ್ಯೆಯ ಆರೋಪಿಗಳನ್ನು ಗುರುತಿಸಿ ಬಂಧಿಸುವ ಪ್ರಕ್ರಿಯೆ ಪೊಲೀಸರಿಂದ ನಡೆಯುತ್ತಿದೆ. ಇದರ ಹಿಂದಿನ ಶಕ್ತಿಗಳನ್ನು ಮಟ್ಟ ಹಾಕುವ ಕೆಲಸ ಮಾಡಬೇಕಿದೆ ಮತ್ತು ಅದನ್ನು ಸರಕಾರ ಮಾಡಲಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭರವಸೆ ವ್ಯಕ್ತಪಡಿಸಿದ್ದಾರೆ.

ಗುರುವಾರ ಇಲ್ಲಿನ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಪ್ರವೀಣ್ ಹತ್ಯೆಯ ಹಿಂದೆ ಪಿಎಫ್‍ಐ ಕೈವಾಡ ಕಂಡುಬರುತ್ತಿದೆ. ಪಿಎಫ್‍ಐ ನಿಯಂತ್ರಣ ಮತ್ತು ನಿಷೇಧದ ವಿಚಾರ ಕೇಂದ್ರ ಸರಕಾರದ ಮುಂದಿದೆ. ಅದಕ್ಕೆ ಅಗತ್ಯ ಪ್ರಕ್ರಿಯೆಗಳನ್ನು ಕೇಂದ್ರ ಕೈಗೊಳ್ಳಲಿದೆ. ಪಿಎಫ್‍ಐ ನಿಷೇಧಿಸಲು ಒತ್ತಾಯಿಸಲಾಗುವುದು' ಎಂದು ಹೇಳಿದರು.

‘ಪ್ರವೀಣ್ ಮನೆಗೆ ಮುಖ್ಯಮಂತ್ರಿ ಭೇಟಿ ಕೊಡಲಿದ್ದು, ಪಕ್ಷವು ಅವರಿಗೆ ಸಾಂತ್ವನ ಹೇಳುವುದಲ್ಲದೆ, ಅವರ ಕುಟುಂಬಕ್ಕೆ ಬೇಕಾದ ಜವಾಬ್ದಾರಿಯನ್ನು ವಹಿಸಲಿದೆ. ಸರಕಾರ ಅವರ ಆಶಯಗಳನ್ನು ಈಡೇರಿಸಲಿದೆ. ನಿನ್ನೆ ದುಃಖ ಮತ್ತು ಭಾವನೆ ಹೊರಹಾಕುವ ಸಂದರ್ಭದಲ್ಲಿ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದೆ. ಇದು ದೇಶದೆಲ್ಲೆಡೆ ಇರುವ ಜಿಹಾದಿ ಮಾನಸಿಕತೆ ವಿರುದ್ಧ ನಡೆಯುತ್ತಿರುವ ಹೋರಾಟ. ಜಿಹಾದಿ ಹೆಸರಿನಲ್ಲಿ ಕೋಮುಗಲಭೆ ಹಾಗೂ ಅಶಾಂತಿ ನಿರ್ಮಿಸಲು ಯತ್ನಿಸಲಾಗುತ್ತಿದೆ. ಇದರ ವಿರುದ್ಧ ದೇಶವ್ಯಾಪಿ ಹೋರಾಟ ನಡೆಯಬೇಕಿದೆ' ಎಂದು ಅವರು ತಿಳಿಸಿದರು.

‘ಪಕ್ಷಕ್ಕೆ ರಾಜೀನಾಮೆ ಕೊಟ್ಟವರನ್ನು ಕರೆದು ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು. ರಾಜ್ಯದಲ್ಲೂ ಕಠಿಣ ಕಾನೂನಿನ ಅವಶ್ಯಕತೆ ಇದೆ. ಕೇಂದ್ರವು ಮೋದಿಯವರ ನೇತೃತ್ವದಲ್ಲಿ ಭಯೋತ್ಪಾದನೆ ನಿಯಂತ್ರಣಕ್ಕೆ ಕೈಗೊಂಡ ತೀರ್ಮಾನದ ಮಾದರಿಯಲ್ಲೇ ಇಲ್ಲಿ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಅಂತಹ ನಿರ್ಣಯಗಳನ್ನು ನಮ್ಮ ಸರಕಾರ ತೆಗೆದುಕೊಳ್ಳಲಿದೆ' ಎಂದು ಕಟೀಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News