×
Ad

ಮಾಹಿತಿ ನೀಡದ ಪ್ರಾಂಶುಪಾಲರ ಜುಲೈ ತಿಂಗಳ ವೇತನ ತಡೆಹಿಡಿಯುವಂತೆ ಆದೇಶ

Update: 2022-07-28 17:41 IST
ಸಾಂದರ್ಭಿಕ ಚಿತ್ರ- PTI

ಬೆಂಗಳೂರು, ಜು.28: ಸಿಬ್ಬಂದಿಗಳಿಗೆ ಹೆಚ್ಚುವರಿಯಾಗಿ ಪಾವತಿ ಮಾಡಿರುವ ಮೊತ್ತವನ್ನು ಹಿಂಪಡೆದು ಸರಕಾರಕ್ಕೆ ಜಮೆ ಮಾಡಲು ಕ್ರಮ ವಹಿಸದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರು ಹಾಗೂ ಅವರ ಕಚೇರಿಯ ವ್ಯಾಪ್ತಿಯಲ್ಲಿ ಬರುವ ಕಾಲೇಜಿನ ಪ್ರಾಂಶುಪಾಲರ ಜುಲೈ ತಿಂಗಳ ವೇತನವನ್ನು ತಡೆಹಿಡಿಯುವಂತೆ ಆದೇಶಿಸಲಾಗಿದೆ. 

2006ರ 6ನೇ ಹಾಗೂ 2016ರ 7ನೇ ಪರಿಷ್ಕೃತ ಯುಜಿಸಿ ವೇತನ ಶ್ರೇಣಿಗಳ ಅನ್ವಯ ಈಗಾಗಲೇ ಹೆಚ್ಚುವರಿಯಾಗಿ ಪಾವತಿಸಿರುವ ಮೊತ್ತವನ್ನು ಹಿಂಪಡೆದು ಸರಕಾರಕ್ಕೆ ಜಮೆ ಮಾಡಿ ಮಾಹಿತಿಯನ್ನು ಒದಗಿಸುವಂತೆ ಸಂಬಂಧಪಟ್ಟ ಪ್ರಾಂಶುಪಾಲರು ಹಾಗೂ ಜಂಟಿ ನಿರ್ದೇಶಕರಿಗೆ ಸೂಚಿಸಲಾಗಿತ್ತು. ಆದರೆ ಪ್ರಾಂಶುಪಾಲರು ಮತ್ತು ಜಂಟಿ ನಿರ್ದೇಶಕರು ಮಾಹಿತಿ ನೀಡದ ಕಾರಣ ನೋಟಿಸ್ ಜಾರಿ ಮಾಡಲಾಗಿತ್ತು. 

ಹಾಗಾಗಿ ಮಾಹಿತಿಯನ್ನು ಒದಗಿಸದ ಬೆಂಗಳೂರು ಸೇರಿ ಮೈಸೂರು, ಶಿವಮೊಗ್ಗ, ಧಾರವಾಡ ಹಾಗೂ ಕಲಬುರಗಿಯ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರ ವೇತನವನ್ನು, ಅವರ ವ್ಯಾಪ್ತಿಯಲ್ಲಿ ಮಾಹಿತಿಯನ್ನು ಒದಗಿಸದ ಸರಕಾರಿ ಕಾಲೇಜಿನ ಪ್ರಾಂಶುಪಾಲರ ಜುಲೈ ವೇತನವನ್ನು ಆಯುಕ್ತರ ಮುಂದಿನ ಆದೇಶದವರೆಗೂ ತಡೆಹಿಡಿಯಲಾಗಿದೆ.  

ಹಾಗೆಯೇ, ಮಾಹಿತಿಯನ್ನು ನೀಡದ ಖಾಸಗಿ ಅನುದಾನಿತ ಕಾಲೇಜಿನ ಪ್ರಾಂಶುಪಾಲರ ಜುಲೈ ತಿಂಗಳ ವೇತನವನ್ನು ಪ್ರಾದೇಶಿಕ ಜಂಟಿ ನಿರ್ದೇಶಕರು ಆಯುಕ್ತರ ಮುಂದಿನ ಆದೇಶದವರೆಗೂ ತಡೆಹಿಡಿಯಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರು ಜ್ಞಾಪನ ಪತ್ರ ಹೊರಡಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News