×
Ad

ಕೋಮುದ್ವೇಷದ ಹತ್ಯೆಗಳ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು: ಪ್ರಿಯಾಂಕ್ ಖರ್ಗೆ

Update: 2022-07-28 18:09 IST

ಬೆಂಗಳೂರು, ಜು.28: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಯುವಕ ಪ್ರವೀಣ್ ಹತ್ಯೆ ಪ್ರಕರಣದ ತನಿಖೆ ಮುಕ್ತ ಹಾಗೂ ಪಾರದರ್ಶಕವಾಗಬೇಕು. ಅಲ್ಲದೆ, ರಾಜ್ಯದಲ್ಲಿ ಇದುವರೆಗೂ ಆಗಿರುವ ಕೋಮುಗಲಭೆ ಹಾಗೂ ಕೋಮು ದ್ವೇಷದ ಹತ್ಯೆಗಳ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಕೋಮು ವಿಷ ಬೀಜ ಬಿತ್ತುತ್ತಿರುವ ಎಲ್ಲ ಸಮುದಾಯಗಳ ಸಂಘಟನೆಗಳನ್ನು ನಿಷೇಧಿಸಬೇಕು. ಇದಕ್ಕೆ ನಾವು ಬೆಂಬಲಿಸುತ್ತೇವೆ ಎಂದರು. 

ಬಿಜೆಪಿ ಸರಕಾರ ತನ್ನ ಒಂದು ವರ್ಷದ ಸಾಧನೆಯ ಜನೋತ್ಸವ ಕಾರ್ಯಕ್ರಮವನ್ನು ಪ್ರವೀಣ್ ಅವರ ಸಾವಿನಿಂದ ತೀವ್ರವಾಗಿ ಮನನೊಂದು ರದ್ದು ಮಾಡಿರುವುದಾಗಿ ತಿಳಿಸಿದೆ. ಆದರೆ ಸತ್ಯಾಂಶ ಏನೆಂದರೆ, ಪ್ರವೀಣ್ ಅವರ ಹತ್ಯೆಯಾಗಿದ್ದು ಜು.26ರಂದು, ಮುಖ್ಯಮಂತ್ರಿಗಳ ಮನಸ್ಸು ಕರಗಿದ್ದು ಜು.28ರ ಮಧ್ಯ ರಾತ್ರಿ 12:30ಕ್ಕೆ. ಜನಾಕ್ರೋಶದಿಂದಾಗಿ ಜನೋತ್ಸವ ಕಾರ್ಯಕ್ರಮ ರದ್ದಾಗಿದೆ. ಸಚಿವ ಸುನಿಲ್ ಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರಿಗೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ದಿಗ್ಬಂಧನ ಮಾಡಿದಾಗ, ಬಿಜೆಪಿ ಯುವ ಮೋರ್ಚಾ ಹಾಗೂ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಲು ಮುಂದಾದಾಗ ಜ್ಞಾನೋದಯವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಬಿಜೆಪಿ ಕಾರ್ಯಕರ್ತರು ಗೃಹ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ರಾಜೀನಾಮೆಗೆ ಪಟ್ಟು ಹಿಡಿದು, ಬಿಜೆಪಿ ಸರಕಾರದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂದಾದರೆ ಬಿಜೆಪಿ ಸರಕಾರ ಇರಬೇಕೇ ಎಂದು ಆಕ್ರೋಶದಿಂದ ಮಾತನಾಡಿದಾಗ ಅವರಿಗೆ ಜ್ಞಾನೋದಯವಾಗಿದೆ. ಪ್ರವೀಣ್ ಅವರ ಪತ್ನಿಯೇ ಈ ಸರಕಾರದಿಂದ ಯಾರಿಗೂ ನ್ಯಾಯ ಸಿಗುವುದಿಲ್ಲ ಎಂದು ಹೇಳಿದ್ದಾರೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಇದ್ದಾರೆ ಎಂದು ಬಿಜೆಪಿ ಕಾರ್ಯಕರ್ತರಿಗೆ ಅನುಮಾನ ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕೆ ಬಿಜೆಪಿ ಶಾಸಕ ಯತ್ನಾಳ್ ‘ಕರ್ನಾಟಕಕ್ಕೆ ಬಲಿಷ್ಠವಾದ ಗೃಹ ಸಚಿವರು ಬೇಕು' ಎಂದು ಹೇಳಿರುವುದು. ಮಾಧ್ಯಮಕ್ಕೆ ನಿನ್ನೆ ಸಂದರ್ಶನ ನೀಡಿದ ಸಂಸದ ತೇಜಸ್ವಿ ಸೂರ್ಯ, ಹಿಂದೂ ಕಾರ್ಯಕರ್ತರ ಸಾವಿನ ಸಂಖ್ಯೆ ಹೆಚ್ಚುತ್ತಲೆ ಇದೆ ಇದು ನಿಲ್ಲುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಿಮ್ಮದೆ ಪಕ್ಷದ ಸರಕಾರವಿದೆ, ಈ ಪ್ರಶ್ನೆ ಮೂಲಕ ನಿಮ್ಮ ಮುಖ್ಯಮಂತ್ರಿ, ಗೃಹ ಸಚಿವರು ಅಸಮರ್ಥರು ಎಂದು ನೀವೇ ಹೇಳುತ್ತಿದ್ದೀರಿ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ಸರಕಾರವಿದ್ದಾಗ ಮತಾಂಧರ 1,500 ಪ್ರಕರಣಗಳನ್ನು ಹಿಂಪಡೆದಿದ್ದಾರೆ ಎಂದು ತೇಜಸ್ವಿ ಸೂರ್ಯ ಟೀಕಿಸಿದ್ದಾರೆ. ಆದರೆ, ಕಾಂಗ್ರೆಸ್ ಸರಕಾರದಲ್ಲಿ ಕೋಮು ಗಲಭೆಯಲ್ಲಿ ಬಂಧಿತರಾದವರ ಯಾವುದೇ ಪ್ರಕರಣ ಹಿಂಪಡೆದಿಲ್ಲ. ಒಂದು ವೇಳೆ ಕೊಲೆಗಡುಕರ ಪ್ರಕರಣ ಹಿಂಪಡೆದಿದ್ದರೆ, ಕಳೆದ 3 ವರ್ಷಗಳಿಂದ ನಿಮ್ಮ ಸರಕಾರ ಏಕೆ ಆ ಪ್ರಕರಣಗಳನ್ನು ಮರು ದಾಖಲಿಸಿಲ್ಲ? ನಾಲ್ಕು ವರ್ಷದಿಂದ ಪರೇಶ್ ಮೆಸ್ತಾ ಪ್ರಕರಣ ಸಿಬಿಐನಲ್ಲಿದೆ. ನಿಮ್ಮ 25 ಸಂಸದರ ಪೈಕಿ ಯಾರಾದರೂ ಒಬ್ಬರು ಈ ಪ್ರಕರಣ ಏನಾಯ್ತು ಎಂದು ಕಾಳಜಿ ವಹಿಸಿದ್ದಾರಾ? ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ಪ್ರಣಾಳಿಕೆಯಲ್ಲಿ ಪಿಎಫ್‍ಐ, ಕೆಎಫ್‍ಡಿ ಸಂಘಟನೆಗಳನ್ನು ನಿಷೇಧಿಸುವುದಾಗಿ ತಿಳಿಸಿದ್ದಾರೆ. ಕಳೆದ ಮೂರು ವರ್ಷದಿಂದ ಅವರ ಸರಕಾರ ಇದ್ದರೂ ಈ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಯಾಕೆ ಕಳಿಸಿಲ್ಲ? ಆರೆಸೆಸ್ಸ್ ಮೂಲದ ಸತ್ಯಜಿತ್ ಎಂಬುವರ ಸಂದರ್ಶನ ಒಂದರಲ್ಲಿ 'ರಾಜಕೀಯವಾಗಿ ಕಾಂಗ್ರೆಸ್ಸನ್ನು ಸೋಲಿಸಬೇಕಾದರೆ ಎಸ್‍ಡಿಪಿಐ ಬಲವಾಗಬೇಕು’ ಎಂದು ತಿಳಿಸಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಬಿಜೆಪಿಯವರಿಗೆ ತಮ್ಮ ಕಾರ್ಯಕರ್ತರ ಬಗ್ಗೆ ಯಾವ ರೀತಿ ಕಾಳಜಿ ಇದೆ ಎಂದು ಹರ್ಷ ಅವರ ಸಹೋದರಿ ಸ್ಪಷ್ಟವಾಗಿ ಹೇಳಿದ್ದಾರೆ. ಹರ್ಷ ಹಂತಕರಿಗೆ ಜೈಲಿನಲ್ಲಿ ರಾಜಾಥಿತ್ಯ ನೀಡಲಾಗಿದೆ. ಹರ್ಷ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡಿಲ್ಲ. ಬದಲಿಗೆ ಕೋವಿಡ್‍ನಿಂದ ಮೃತಪಟ್ಟವರಿಗೆ ನೀಡಬೇಕಿದ್ದ ನಿಧಿಯಿಂದ ನೀಡಲಾಗಿದೆ ಎಂದು ಅವರು ಆರೋಪಿಸಿದರು. 

ರಾಜ್ಯದ ಜನರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಿ. ನೀವು ನಾಯಕತ್ವ ಬದಲಾಯಿಸಲು ಇಚ್ಛೆ ಇಲ್ಲ ಎಂದರೆ ಚುನಾವಣೆ ಎದುರಿಸೋಣ ಬನ್ನಿ. ನಾವು ಸಿದ್ಧರಿದ್ದೇವೆ. ಬಿಜೆಪಿ ಕಾರ್ಯಕರ್ತರೇ ನಿಮ್ಮ ಸಾಮಥ್ರ್ಯವನ್ನು ಪ್ರಶ್ನಿಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News