ಶಾಲಾ ಮಕ್ಕಳ ತಲೆ ಸಂಸ್ಕೃತಮಯವಾಗಿಸಲು ಪಟ್ಟಭದ್ರ ಹಿತಾಸಕ್ತಿಗಳ ಷಡ್ಯಂತ್ರ: ಶಿಕ್ಷಣತಜ್ಞರ ಖಂಡನೆ

Update: 2022-07-28 15:13 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.28: ಶಾಲಾ ಹಂತದಲ್ಲಿಯೇ ಮಕ್ಕಳ ತಲೆಯಲ್ಲಿ ಹಿಂದೂ ಧರ್ಮ, ಸಂಸ್ಕೃತಮಯವಾಗಿಸಲು ಸುತ್ತೋಲೆ ಹೊರಡಿಸುತ್ತಿರುವುದು, ಪಟ್ಟಭದ್ರ ಹಿತಾಸಕ್ತಿಗಳ ಷಡ್ಯಂತ್ರವಾಗಿದೆ. ಕನ್ನಡ ಶಾಲೆಯಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಧಾರ್ಮಿಕ ಪಠಣ ಮಾಡಲು ಶಿಕ್ಷಣ ಇಲಾಖೆ ಕ್ರಮ ವಹಿಸುವಂತೆ ಶಿಕ್ಷಣತಜ್ಞರು ಒತ್ತಾಯಿಸಿದ್ದಾರೆ.  

ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ. ವಿ.ಪಿ., ಪ್ರೊ. ಜಿ. ರಾಮಕೃಷ್ಣ, ಡಾ. ವಸುಂಧರಾ ಭೂಪತಿ, ಮಲ್ಲಿಗೆ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಟಿ.ಆರ್.ಚಂದ್ರಶೇಖರ್, ಗೋಪಾಲಕೃಷ್ಣ ನಾಯರಿ, ಬಿ.ಎನ್. ಯೋಗಾನಂದ ಈ ಕುರಿತು ಜಂಟಿಯಾಗಿ ಪ್ರಕಟನೆ ಹೊರಡಿದ್ದಾರೆ.

ಶಿಕ್ಷಣ ಇಲಾಖೆಯ ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷೆ ಶಾಲೆಗಳ ನಿರ್ದೇಶನಾಲಯವು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಧಾರ್ಮಿಕ ಪಠಣ ಸ್ಪರ್ಧೆಗೆ ವಿಷಯ ನಿಗದಿಪಡಿಸಿ ಜ್ಞಾಪನ ಹೊರಡಿಸಿದೆ. ಸಂವಿಧಾನವು, ಜಾತ್ಯತೀತ ಮೌಲ್ಯಗಳನ್ನು ಪ್ರತಿಪಾದಿಸುವುದರಿಂದ, ಸಾರ್ವಜನಿಕ ಸಂಸ್ಥೆಗಳಲ್ಲಿ ಆದಷ್ಟು ಧರ್ಮ ಹಾಗೂ ಸಂಪ್ರದಾಯದ ವಿಷಯಗಳನ್ನು ತರದಿರುವುದು ಒಳ್ಳೆಯದು ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ, ಭಾರತದ ಸಂವಿಧಾನ, ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗಳಿಂದ ಆಯ್ದ ಪ್ರಸ್ತಾವನೆ, ಪರಿಚ್ಛೇಧಗಳನ್ನಾಗಲಿ ಅಥವಾ ಹೆಸರಾಂತ ಸಮಾಜ ಸುಧಾರಕರು, ಕವಿಗಳು ಹಾಗು ದಾರ್ಶನಿಕರು ಮಾನವನ ಘನತೆ ಮತ್ತು ಸಮಾನತೆಯನ್ನು ಎತ್ತಿ ಹಿಡಿಯಲು ರಚಿಸಿದ ಪದ್ಯ, ಗದ್ಯ ಅಥವಾ ಕವನಗಳಿಂದ ಆಯ್ದ ಪ್ಯಾರಾ, ಸಾಲುಗಳನ್ನು ಪಠಣ ಮಾಡಬಹುದು ಎಂದು ವಿವರಿಸಿದ್ದಾರೆ.

ಭಾರತದಂತಹ ದೇಶದಲ್ಲಿ, ಶಾಲೆಯನ್ನು ಒಂದು ಜಾತ್ಯತೀತ ಹಾಗೂ ಧರ್ಮಾತೀತ ಚೌಕಟ್ಟಿನ ಮಾನವೀಯತೆಯ ತಾಣವನ್ನಾಗಿಸುವುದು ತುಂಬಾ ಮಹತ್ವದ ವಿಷಯವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ಶಾಲೆಯಲ್ಲಿ ಪ್ರತಿಭಾಕಾರಂಜಿ ಆಯೋಜಿಸುವುದು, ಮಕ್ಕಳ ಜ್ಞಾನ, ಭಾಷಾ ಕೌಶಲ ಪರಿಶೀಲಿಸಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಕ್ಕೆ ಹೊರತು ಧಾರ್ಮಿಕ ಪ್ರಚಾರಕಲ್ಲ ಎಂದು ಖಂಡಿದ್ದಾರೆ.

ಧಾರ್ಮಿಕ ಪಠಣ ಸ್ಪರ್ಧೆ ಮಾಡಲೇಬೇಕೆಂದರೆ ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರಿಶ್ಚಿಯನ್, ಹಿಂದೂ ಹಾಗೂ ಲಿಂಗಾಯಿತ ಧರ್ಮಗಳ ಗ್ರಂಥಗಳಿಂದ ಆಯ್ದ ಅಂಶಗಳ ಧಾರ್ಮಿಕ ಪಠಣವಿರಬೇಕು. ಇದು ಸರ್ವಧರ್ಮಗಳಿಗೆ ಸಮಾನ ಅವಕಾಶ ಕಲ್ಪಿಸುವುದಲ್ಲದೆ ಸರ್ವಧರ್ಮ ಸಮನ್ವಯಕ್ಕೆ ಭೂಮಿಕೆ ಕಲ್ಪಿಸುತ್ತದೆ ಎಂದು ತಿಳಿಸಿದ್ದಾರೆ.

ಜೊತೆಗೆ ಕನ್ನಡ ಶಾಲೆಗಳಲ್ಲಿ ಧಾರ್ಮಿಕ ಪಠಣ ಕನ್ನಡಲ್ಲಿರಬೇಕು. ಮಕ್ಕಳು ಸರ್ವಧರ್ಮಗಳ ತಿರುಳನ್ನು ತನ್ನ ಭಾಷೆಯಲ್ಲಿ ತಿಳಿದು ಅರ್ಥೈಸಿಕೊಳ್ಳುವಂತಾಗಬೇಕು. ಶಾಲಾ ಪ್ರತಿಭಾ ಕಾರಂಜಿಯಲ್ಲಿ ಧಾರ್ಮಿಕ ಪಠಣವು ಈ ಹಿಂದೆ ಮಗು ಯಾವುದೇ ಭಾಷೆಯಲ್ಲಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಈಗ ಭಗವದ್ಗೀತೆಯನ್ನು ಸಂಸ್ಕೃತ ಅಥವಾ ಇಸ್ಲಾಮಿನವರು ಅರೇಬಿಕ್ ಭಾಷೆಯಲ್ಲಿ ಪಠಿಸಲು ನಿಯಮ ನೀಡಿರುವುದು ಕನ್ನಡ ಮಾತೃಭಾಷಾ ಶಾಲಾ ಮಕ್ಕಳಿಗೆ ಮಾಡುವ ಭಾಷೆಯ ಹಕ್ಕಿನ ಉಲ್ಲಂಘನೆಯಾಗಿದೆ. ಹಿಂದೂ ಧರ್ಮವನ್ನು ಸಂಸ್ಕೃತಕ್ಕೆ ಸೀಮಿತ ಮಾಡುತ್ತಿರುವುದು ಒಕ್ಕೂಟ ವ್ಯವಸ್ಥೆಯ ಕನ್ನಡ ರಾಜ್ಯಕ್ಕೆ ಮಾಡಿದ ಅಪಮಾನವಾಗಿದೆ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News