×
Ad

VIDEO- ‘ಕಾಂಗ್ರೆಸ್ ಸರಕಾರವಿದ್ದಿದ್ದರೆ ರಸ್ತೆಗಿಳಿದು ಕಲ್ಲು ಹೊಡೆಯಬಹುದಿತ್ತು’: ಸಂಸದ ತೇಜಸ್ವಿ ಸೂರ್ಯ ಆಡಿಯೋ ವೈರಲ್

Update: 2022-07-28 22:03 IST

ಬೆಂಗಳೂರು, ಜು.28: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುತ್ತಿರುವ ಬೆನ್ನಲ್ಲೆ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಕಾರ್ಯಕರ್ತರೊಬ್ಬರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದರೂ ಹಿಂದೂ ಕಾರ್ಯಕರ್ತರ ಕೊಲೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಯುವ ಮೋರ್ಚಾ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಆಕ್ರೋಶವನ್ನು ತಣಿಸಲು ತೇಜಸ್ವಿ ಸೂರ್ಯ ಅವರದ್ದು ಎನ್ನಲಾದ ಆಡಿಯೋದಲ್ಲಿ ‘ನಿಮ್ಮಷ್ಟೇ ನಮಗೂ ಹತ್ಯೆ ವಿಚಾರದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಷ್ಟೇ ಕೋಪವೂ ಇದೆ. ಹಾಗೆ ಮಾಡಬೇಕು ಹೀಗೆ ಮಾಡಬೇಕು ಎಂದು ನಿಮ್ಮಂತೆ ನಮಗೂ ಅನಿಸುತ್ತದೆ. ಆದರೆ, ಅಧಿಕಾರದಲ್ಲಿರೋದು ನಮ್ಮದೇ ಸರಕಾರ. ಕಾಂಗ್ರೆಸ್ ಸರಕಾರ ಇದ್ದಿದ್ದರೆ, ರಸ್ತೆಗೆ ಇಳಿದು ಕಲ್ಲು ಹೊಡೆಯಬಹುದಿತ್ತು’ ಎಂದು ಹೇಳಲಾಗಿದೆ.

ಅಲ್ಲದೆ, ‘ಆದರೇನು ಮಾಡೋಣ, ನಮ್ಮದೇ ಸರಕಾರ ಇದ್ದಾಗ ಹಾಗೆ ಮಾಡಲು ಬರುವುದಿಲ್ಲ. ನಾನೇ ಮಂಗಳೂರಿಗೆ ಬರುತ್ತೇನೆ. ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ. ಎಲ್ಲರೂ ಕೂಡಿಕೊಂಡು ಮುಖ್ಯಮಂತ್ರಿಯನ್ನು ಭೇಟಿ ಮಾಡೋಣ. ಅಲ್ಲಿ ನಮ್ಮ ಬೇಡಿಕೆ ಇಟ್ಟು ನ್ಯಾಯ ಕೇಳೋಣ. ಎನ್‍ಐಎ ತನಿಖೆಗೂ ಆಗ್ರಹಿಸೋಣ. ಹಾಗೆಯೇ ನೆಟ್ಟಾರು ಮನೆಗೆ ಎಲ್ಲ ಜಿಲ್ಲೆಗಳ ಅಧ್ಯಕ್ಷರು ತೆರಳಿ ಅವರ ಕುಟುಂಬಕ್ಕೆ ಅಗತ್ಯ ಆರ್ಥಿಕ ನೆರವನ್ನೂ ಮಾಡಿಸಿಕೊಡೋಣ. ಇದೆಲ್ಲವನ್ನು ಮಾಡಬೇಕು ಎಂದರೆ ನೀವು ರಾಜೀನಾಮೆ ಹಿಂಪಡೆಯಬೇಕು ಎಂದು ಹೇಳಲಾಗಿದೆ.

ಅಲ್ಲದೆ, ಇದೇ ವೇಳೆ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ‘ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವೇ?’ ಎಂದು ತೇಜಸ್ವಿ ಸೂರ್ಯ ಹೇಳಿಕೆ ನೀಡಿರುವ ವಿಡಿಯೋ ಸಹ ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕರು ತೇಜಸ್ವಿ ಸೂರ್ಯ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. 

ಬಿಜೆಪಿ ನಾಯಕರ ಹಿಂದೆಮುಂದೆ ನಾಲ್ಕು ನಾಲ್ಕು ಬಾಡಿಗಾರ್ಡ್‍ಗಳು. ಇವರ ಆಡಳಿತದಲ್ಲಿ ಬಿದ್ದವು ನಾಲ್ಕು ನಾಲ್ಕು ಹಿಂದುಗಳ ಬಾಡಿಗಳು. ಜನತೆಯ ರಕ್ಷಣೆ ನಮ್ಮ ಕೈಯ್ಯಲ್ಲಿ ಸಾಧ್ಯವಿಲ್ಲ ಎನ್ನುವುದನ್ನು ಇಷ್ಟೊಂದು ನಿರ್ಲಜ್ಜವಾಗಿ ಒಪ್ಪಿಕೊಳ್ಳುವ ರಾಜ್ಯ ಬಿಜೆಪಿ ನಾಯಕರ ಅಸಲಿ ಅಜೆಂಡಾವನ್ನು ಯುವ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಹೇಳಿದೆ.

ಪ್ರತಿಯೊಬ್ಬರಿಗೂ ರಕ್ಷಣೆ ಕೊಡಲು ಸಾಧ್ಯವಿದೆಯೇ? ಈ ಮಾತನ್ನು ಹಿಂದೆ ಗೃಹ ಸಚಿವರು, ಈಗ ಸಂಸದರು ಹೇಳಿದ್ದಾರೆ. 'ಹಿಂದೂಗಳ ರಕ್ಷಣೆ' ಎಂಬ ಟ್ಯಾಗ್‍ಲೈನ್‍ನಲ್ಲಿ ಚುನಾವಣೆ ನಡೆಸಿದ ರಾಜ್ಯ ಬಿಜೆಪಿ ನಾಯಕರಿಗೆ ಗೂಟದ ಕಾರು ಸಿಕ್ಕ ನಂತರ, ತಮ್ಮ ಹಿಂದೆಮುಂದೆ ಬಾಡಿಗಾರ್ಡ್‍ಗಳನ್ನು ಇಟ್ಟುಕೊಂಡು ಯೂಟರ್ನ್ ಹೊಡೆದಿದ್ದಾರೆ ಎಂದು ಕಾಂಗ್ರೆಸ್ ಕಿಡಿಗಾರಿದೆ.

ಕಾಂಗ್ರೆಸ್ ಸರಕಾರವಿದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ದೇಶದಲ್ಲಿ ಕಲ್ಲು ಹೊಡೆಯುವವರ ಹಿಂದಿನ ಕುಮ್ಮಕ್ಕು ಅನಾವರಣವಾಗಿದೆ. ಗಲಭೆ, ದೊಂಬಿಗಳ ಕೈವಾಡ ಬಿಜೆಪಿಯದ್ದೇ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಯಾವಾಗ ತೇಜಸ್ವಿ ಸೂರ್ಯನ ಮನೆಗೆ ಬುಲ್ಡೋಜರ್ ನುಗ್ಗಿಸುವಿರಿ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸಂಸದ ತೇಜಸ್ವಿ ಸೂರ್ಯರಿಗಿಂತ ಹಿರಿತನದಲ್ಲಿ, ಅನುಭವದಲ್ಲಿ ಮುಂದಿದ್ದ ಹಲವು ಕಾರ್ಯಕರ್ತರಿದ್ದರು, ಆದರೆ, ದಿಢೀರ್ ಉನ್ನತ ಹುದ್ದೆಗೇರಿದ ತೇಜಸ್ವಿ ಸೂರ್ಯ ವಂಶ ರಾಜಕೀಯದ ಫಲಾನುಭವಿಯಲ್ಲವೇ? ಹಿಂದೂಗಳ ರಕ್ಷಣೆ ಕೊಡುತ್ತೇವೆ ಎಂದಿದ್ದ ರಾಜ್ಯ ಬಿಜೆಪಿ ಇಂದು ಎಲ್ಲರಿಗೂ ರಕ್ಷಣೆ ಸಾಧ್ಯವಿಲ್ಲ ಎಂದಿದ್ದು ಹಿಂದೂಗಳಿಗೆ ಮಾಡಿದ ಘೋರ ಅವಮಾನ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿಯ ‘ಹೆಣ ರಾಜಕೀಯ'ದ ಅಸಲಿಯತ್ತು ಅವರ ಬಾಯಲ್ಲೇ ಹೊರಬಂದಿದೆ. ಬಿಜೆಪಿಯ ಇಂತಹ ಪಾಪಗಳ ಕೊಡ ತುಂಬುತ್ತಿದೆ, ಅವರದ್ದೇ ಕಾರ್ಯಕರ್ತರು ಛೀಮಾರಿ ಹಾಕುತ್ತಿದ್ದಾರೆ, ಆದರೂ ಅಮಾಯಕರನ್ನು ಬಲಿ ಕೊಡುವ ಇವರ ಶವ ರಾಜಕೀಯದ ಹಪಹಪಿತನ ಕೊನೆಯಾಗಿಲ್ಲ ಎಂದು ಕಾಂಗ್ರೆಸ್ ಕಿಡಿಗಾರಿದೆ.

ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಯೇ ಅವರ ಅಪ್ರಬುದ್ಧತೆ ತೋರಿಸುತ್ತಿದೆ. ಸಮಾಜದಲ್ಲಿರುವ ಸರಿಸುಮಾರು ಶೇಕಡ ಒಂದರಷ್ಟಿರುವ ಘಾತುಕಶಕ್ತಿಗಳನ್ನ ಮಟ್ಟಹಾಕಿದರೆ ಬಾಕಿ ಇರುವ ಶೇ.99ರಷ್ಟು ಜನರಲ್ಲಿ ಧೈರ್ಯ ಹಾಗೂ ವಿಶ್ವಾಸ ಮೂಡಲಿದೆ. ಅದನ್ನ ಬಿಟ್ಟು ಭದ್ರತೆ ನೀಡಲು ಸಾಧ್ಯವೇ ಎಂದು ಆಡಳಿತ ಪಕ್ಷದವರಾಗಿಯೇ ಪ್ರಶ್ನಿಸುವುದು ನಿಮ್ಮ ಅಸಮರ್ಥತೆ ಹಾಗೂ ಅಸಹಾಯಕತೆಯನ್ನ ತೋರಿಸುತ್ತಿದೆ. ಜನ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ. ನೆನಪಿರಲಿ.

ಯು.ಟಿ.ಖಾದರ್, ವಿಧಾನಸಭೆ ವಿಪಕ್ಷದ ಉಪ ನಾಯಕ 

ಸಂಸದ ತೇಜಸ್ವಿ ಸೂರ್ಯ ಕೇವಲ ಹೆಸರಿಗಷ್ಟೇ ತೇಜಸ್ವಿ. ಹಿಂದೂ ಕಾರ್ಯಕರ್ತರ ಸಾವಿನ ಸಂಖ್ಯೆ ಹೆಚ್ಚುತ್ತಲೆ ಇದೆ ಇದು ನಿಲ್ಲುವುದು ಯಾವಾಗ? ಎಂದು ಪ್ರಶ್ನೆ ಕೇಳಿದ್ದಾರೆ. ಎಂಟು ವರ್ಷ ಕೇಂದ್ರದಲ್ಲಿ ಮೋದಿ ಆಡಳಿತ ಹಾಗೂ ರಾಜ್ಯದಲ್ಲಿ ಮೂರು ವರ್ಷ ನಿಮ್ಮದೇ ಆಡಳಿತ ನಡೆದಿದೆ. ಆದರೂ ನೀವೇ ಹಿಂದುಗಳ ಹತ್ಯೆ ಕಡಿಮೆಯಾಗಿಲ್ಲ ಎಂದು ಹೇಳುತ್ತಿದ್ದೀರಿ. ಆ ಮೂಲಕ ನಿಮ್ಮ ಮುಖ್ಯಮಂತ್ರಿ, ಗೃಹ ಸಚಿವರು ಅಸಮರ್ಥರು ಎಂದು ನೀವೇ ಹೇಳುತ್ತಿದ್ದೀರಿ. ಇದು ನಿಲ್ಲುವುದು ಯಾವಾಗ? ಈ ಪ್ರಶ್ನೆಯನ್ನು ನಿಮ್ಮ ಕಾರ್ಯಕರ್ತರೇ ಕೇಳುತ್ತಿದ್ದು ಅದಕ್ಕೆ ಉತ್ತರಿಸಿ.

ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಶಾಸಕ

ಬೆಂಗಳೂರು ನಗರಕ್ಕೆ ಹಾಗೂ ರಾಜ್ಯಕ್ಕೆ ತೇಜಸ್ವಿ ಸೂರ್ಯ ಕೊಡುಗೆ ಏನು ಎಂಬುದು ಗೊತ್ತಿಲ್ಲ. ಜನರು ಅಂಥವರಿಗೆ ಮತ ಕೊಟ್ಟು ಗೆಲ್ಲಿಸಿ ಅಂಥವರಿಂದ ಇಂಥ ಮಾತುಗಳನ್ನು ಕೇಳಬೇಕಾಗಿ ಬಂದಿದೆ. ಜನರಿಗೆ ಇದೆಲ್ಲವನ್ನು ಸಹಿಸಿಕೊಳ್ಳದೇ ಬೇರೆ ವಿಧಿ ಇಲ್ಲ. ಇಲ್ಲಿ ಯಾರಿಗೂ ಗನ್ ಮ್ಯಾನ್ ಬೇಕಿಲ್ಲ. ಆದರೆ ನೆಮ್ಮದಿಯಾಗಿ ಬದುಕಲು ನೆಮ್ಮದಿಯ ವಾತಾವರಣ ಬೇಕಷ್ಟೇ. ಸರಕಾರ ಅಷ್ಟು ಮಾಡಿದರೆ ಸಾಕು.

ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News