×
Ad

ಬಿಜೆಪಿ ಅಧಿಕಾರದ ಹಿಂದೆ ನೆತ್ತರು ಹರಿದಿದೆ: ಚಕ್ರವರ್ತಿ ಸೂಲಿಬೆಲೆ

Update: 2022-07-28 22:08 IST

ಬೆಂಗಳೂರು, ಜು.28: ವಿಧಾನಸೌಧದಲ್ಲಿ ಕುಳಿತಿರುವ ಬಿಜೆಪಿ ನಾಯಕರ ಅಧಿಕಾರದ ಹಿಂದೆ ಕಾರ್ಯಕರ್ತರ ನೆತ್ತರು ಹರಿದಿದೆ ಎಂದು ಯುವ ಬ್ರಿಗೇಡ್‍ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.

ಬೆಳ್ಳಾರೆಯ ಪ್ರವೀಣ್ ಹತ್ಯೆ ಖಂಡಿಸಿ ಗುರುವಾರ ನಗರದ ಟೌನ್‍ಹಾಲ್ ಮುಂಭಾಗ ಕರ್ನಾಟಕ ಹಿಂದೂ ಹಿತರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಇಂದು ಯಾರ್ಯಾರು ವಿಧಾನಸೌಧದಲ್ಲಿ ಇದ್ದಾರೋ ಅವರೆಲ್ಲರೂ ಕಾರ್ಯಕರ್ತರ ನೆತ್ತರು ಹರಿಸಿಕೊಂಡೇ ಬಂದಿದ್ದಾರೆ. ಅಲ್ಲದೆ, ಈ ರಾಜ್ಯ ಸರಕಾರಕ್ಕೆ ನಾಚೀಕೆ ಆಗಬೇಕು. ಏಕೆಂದರೆ, ಇಂದು ನಾವು ಹೋರಾಟ ನಡೆಸದಿದ್ದರೆ, ಚಿಕ್ಕಬಳ್ಳಾಪುರದಲ್ಲಿ ಸಂಭ್ರಮ ಮಾಡುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.

ನಮ್ಮ ರಕ್ಷಣೆ ನಾವೇ ಮಾಡ್ಕೋಬೇಕು ಎಂದರೆ ಈ ಸರಕಾರ ಏಕೆ ಬೇಕಾಗಿದೆ. ನಮ್ಮ ಕಾರ್ಯಕರ್ತರ ಮೇಲೆ ಲಾಟಿಯಿಂದ ಹೊಡೆದಿದ್ದಾರೆ. ಈ ಸರಕಾರ ನಿರ್ವೀರ್ಯ ಆಗಿದ್ದು, ಹೀಗೆ ಮುಂದುವರೆದರೆ, ನಾವು ಈ ಸರಕಾರವನ್ನು ಸೋಲಿಸುತ್ತೇವೆ ಎಂದು ಅವರು ಹೇಳಿದರು.

ಮೋಹನ್ ಗೌಡ ಮಾತನಾಡಿ, ಬಿಜೆಪಿ ಸರಕಾರ ಬಂದ ಮೇಲೆ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಹರ್ಷ, ಚಂದ್ರು ಕೊಲೆಯ ಬಳಿಕ ಈಗ ಪ್ರವೀಣ್ ಹತ್ಯೆಯಾಗಿದೆ. ಇಲ್ಲಿಯವರೆಗೆ ಒಟ್ಟು 35 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಪಿಎಫ್‍ಐ ನಿಷೇಧಿಸಬೇಕು. ಸೂಕ್ತ ರಕ್ಷಣೆ ಒದಗಿಸಬೇಕೆಂದು ಘೋಷಣೆ ಕೂಗಿ ಹಿಂದೂಪರ ಕಾರ್ಯಕರ್ತರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪಟಾಪಟ್ ಶ್ರೀನಿವಾಸ್, ಮನೋಹರ್ ಅಯ್ಯರ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News