ಪ್ರವೀಣ್‌ ಕುಟುಂಬಕ್ಕೆ ಕೊಟ್ಟ 10 ಲಕ್ಷ ರೂ. ನನ್ನದು: ಅಶ್ವತ್ಥ ನಾರಾಯಣ ವಿರುದ್ಧ ಉದ್ಯಮಿಯಿಂದ ಭ್ರಷ್ಟಾಚಾರದ ಆರೋಪ

Update: 2022-07-29 19:04 GMT

ಬೆಂಗಳೂರು, ಜು.29: ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳ ತಂಡದಿಂದ ಹತ್ಯೆಗೀಡಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ವೈಯಕ್ತಿಕ ನೆರವು ಘೋಷಿಸಿದ್ದು, ಇದೀಗ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಯುವ ಉದ್ಯಮಿಯೊಬ್ಬರು ಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ಅವರು ಕೊಟ್ಟ 10 ಲಕ್ಷ ರೂ. ನನ್ನದು ಎಂದು ಹೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಚಿವರ ಇಲಾಖೆಯಡಿ ಬರುವ  ಕರ್ನಾಟಕ ಇನ್ನೋವೇಟಿವ್‌ ಅಂಡ್‌ ಟೆಕ್ನಾಲಜಿ ಸೊಸೈಟಿ Karnataka Innovation and Technology Society ಸ್ಟಾರ್ಟಪ್‌ ಆಯ್ಕೆಯ ವಿಷಯದಲ್ಲಿ ಸಚಿವರಿಗೇ ಸಂದಾಯವಾಗಿರುವ ಹಣವನ್ನೇ ಇದೀಗ ಅವರು ಪ್ರವೀಣ್‌ ಕುಟುಂಬಕ್ಕೆ ಪರಿಹಾರವಾಗಿ ಘೋಷಿಸಿದ್ದಾರೆ. ಹಾಗಾಗಿ  ಹತ್ಯೆಯಾಗಿರುವ ಬಿಜೆಪಿ ಕಾರ್ಯಕರ್ತನ ಕುಟುಂಬಕ್ಕೆ ವೈಯಕ್ತಿಕವಾಗಿ 10 ಲಕ್ಷ ನೀಡುತ್ತಿದ್ದೇನೆ ಅಂತ ಸಚಿವ ಡಾ. ಅಶ್ವಥ್ ನಾರಾಯಣ ಘೋಷಿಸಿರುವ ಹಣ ಅವರ ವೈಯಕ್ತಿಕ ಹಣ ಅಲ್ಲ. ಅದು ನನ್ನ ಹಣ. ಅದು ನನ್ನದೇ ಹಣ. ಅವರ ಹೇಳಿಕೆಯಲ್ಲಿ ಪ್ರವೀಣ್ ಕುಮಾರ್ ಅವರ 10 ಲಕ್ಷ ನೀಡುತ್ತಿದ್ದೇನೆ' ಎಂದು ಆಗಬೇಕು ಎಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯುವ ಉದ್ಯಮಿ ಪ್ರವೀಣ್ ಮಾವಿನಕಾಡು ಬರೆದುಕೊಂಡಿದ್ದಾರೆ. (ಸ್ಕ್ರೀನ್ ಶಾಟ್ ಕೆಳಗಡೆ ಇದೆ)

ಪ್ರವೀಣ್ ಮಾವಿನಕಾಡು ಸ್ಟಾರ್ಟಪ್ ಉದ್ಯಮಿಯಾಗಿದ್ದು, ಸಚಿವ ವಿರುದ್ಧದ ಈ ಆರೋಪ ಸುಳ್ಳು ಎಂದು ವಾದಿಸುವವರು ಆಯ್ಕೆ ಪ್ರಕ್ರಿಯೆಯ ದಾಖಲೆಗಳನ್ನು ತಮ್ಮೆದುರು ಹಾಜರುಪಡಿಸಬಹುದು ಮತ್ತು ತಮ್ಮ ಬರಹದ ವಿರುದ್ಧ ದೂರು ದಾಖಲಿಸುವವರಿಗೆ ಸ್ವಾಗತ ಎಂಬ ವಿಶೇಷ ಸೂಚನೆ ನೀಡುವ ಮೂಲಕ ಪ್ರವೀಣ್ ಮಾವಿನಕಾಡು ತನ್ನ ಮುಖಪುಟ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಪ್ರವೀಣ್ ಮಾವಿನಕಾಡು ಅವರ ಫೇಸ್ ಬುಕ್ ಪೋಸ್ಟ್ ಹೀಗಿದೆ...

ಹತ್ಯೆಯಾಗಿರುವ ಬಿಜೆಪಿ ಕಾರ್ಯಕರ್ತನ ಕುಟುಂಬಕ್ಕೆ ವೈಯುಕ್ತಿಕವಾಗಿ 10 ಲಕ್ಷ ನೀಡುತ್ತಿದ್ದೇನೆ ಅಂತ ಸಚಿವ ಡಾ. ಅಶ್ವಥ್ ನಾರಾಯಣ ಅವರು ಘೋಷಿಸಿದ್ದಾರೆ.

ಬಹಳ ಸಂತೋಷದ ವಿಷಯ.

ಆದರೆ ಅವರ ಘೋಷಣೆಯಲ್ಲಿ ಒಂದು ಸಣ್ಣ ತಪ್ಪು ನುಸುಳಿದಂತಿದೆ. ಅದೇನೆಂದರೆ "ವೈಯುಕ್ತಿಕವಾಗಿ 10 ಲಕ್ಷ ನೀಡುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ. ಆದರೆ ಆ ಹಣ ಅವರ ವೈಯಕ್ತಿಕ ಹಣ ಅಲ್ಲ. ಅದು ನನ್ನ ಹಣ. ಹೌದು ಅದು ನನ್ನದೇ ಹಣ. ಹಾಗಾಗಿ ಅವರ ಹೇಳಿಕೆ  "ಪ್ರವೀಣ್ ಕುಮಾರ್ ಅವರ 10 ಲಕ್ಷ ನೀಡುತ್ತಿದ್ದೇನೆ" ಎಂದು ಆಗಬೇಕು.

ಡಾಕ್ಟ್ರೇ.. ನಿಮಗೆ ನೆನಪಿರಬಹುದು. ಮೂರು ವರ್ಷಗಳ ಹಿಂದೆ ಬೆಂಗಳೂರಿನ ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ಸೋಷಿಯಲ್ ಮೀಡಿಯಾ ಮೀಟ್ ಎನ್ನುವ ಸಣ್ಣ ಕಾರ್ಯಕ್ರಮ ಇಟ್ಟುಕೊಂಡಿದ್ದಿರಿ. ತಮ್ಮ ಆಪ್ತ ಸಿಬ್ಬಂದಿಗಳು  ಮೆಸೆಂಜರ್ ನಲ್ಲಿ ನನ್ನನ್ನು ಸಂಪರ್ಕಿಸಿ, ಅಲ್ಲಿಗೆ ಬರುವಂತೆ ತಿಳಿಸಿದ್ದರು. ಬರಲು ಸಾಧ್ಯವಿಲ್ಲ ಎಂದು ನಾನು ತಿಳಿಸಿದಾಗ ಬಸ್ ಚಾರ್ಜ್ ಬೇಕಿದ್ದರೂ ಕೊಡುತ್ತೇವೆ,ತಾವು ಬರಬೇಕು ಎಂದು ಕರೆದಿದ್ದರು. ನಿಮ್ಮಿಂದ ಬಸ್ ಚಾರ್ಜ್ ಪಡೆಯದೇ ಹೋದರೂ, ನೇರವಾಗಿ ನಿಮ್ಮ ಬಳಿ ಒಂದಷ್ಟು ದೂರು ಹೇಳಿಕೊಳ್ಳಲು ಅವಕಾಶ ಸಿಕ್ಕಿತೆಂದು ಅಲ್ಲಿಗೆ ಹೊರಟುಬಂದಿದ್ದೆ.

ನಿಮ್ಮ ಇಲಾಖೆಯಡಿ ಬರುವ Karnataka Innovation and Technology Society ಎನ್ನುವ ಸಂಸ್ಥೆಯಲ್ಲಿ ಹೇಗೆ ಭ್ರಷ್ಟಾಚಾರ ನಡೆಯುತ್ತಿದೆ, ಯುವಕರಿಗೆ ಹೇಗೆಲ್ಲಾ ಅನ್ಯಾಯ ಮಾಡಲಾಗುತ್ತಿದೆ ಎನ್ನುವುದನ್ನು  ನಿಮ್ಮ ಮುಂದೆ ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದೆ. ಕ್ರಮ ಕೈಗೊಳ್ಳುವಂತೆಯೂ ತಿಳಿಸಿದ್ದೆ. ಆದರೆ ನನ್ನ ದೂರಿನ ಬಗ್ಗೆ ನೀವು ಯಾವುದೇ ಕ್ರಮ ಕೈಗೊಳ್ಳುವ ಮಾತನಾಡದೆ, ಎರಡೆರಡು ಬಾರಿ ಕಾಫಿ ಕುಡಿಸಿ, ತಿಂಡಿ ತಿನ್ನಿಸಿ, ಹೆಗಲ ಮೇಲೆ ಕೈ ಹಾಕಿ ಕಳಿಸಿಕೊಟ್ಟಿದ್ದಿರಿ. ಆಗಲೇ ನನಗೆ ಆ ಭ್ರಷ್ಟಾಚಾರದಲ್ಲಿ ನಿಮ್ಮ ಪಾಲೂ ಇದೆ ಎನ್ನುವ ಅನುಮಾನ ಬಂದಿದ್ದು.

ಯಾವುದಕ್ಕೂ ಇರಲಿ ಎಂದು ಆ ವರ್ಷದ ಆಯ್ಕೆ ಪ್ರಕ್ರಿಯೆಯ ಎಲ್ಲ ದಾಖಲೆಗಳನ್ನೂ ಮಾಹಿತಿ ಹಕ್ಕಿನ ಅಡಿಯಲ್ಲಿ ಕೇಳಿದೆ. ನಿಮ್ಮ ಇಲಾಖೆಯ ಅಧಿಕಾರಿಗಳು ಅವುಗಳನ್ನು ಕೊಡಲು ಮೊದಲು  ಒಪ್ಪಲಿಲ್ಲವಾದರೂ, ನಂತರ ಅನಿವಾರ್ಯವಾದಾಗ ಕೊಡಲೇಬೇಕಾಯಿತು. ಆ ದಾಖಲೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ಹಲವು ಅರ್ಹರನ್ನು ಕೈ ಬಿಟ್ಟಿರುವುದು, ತಮಗೆ ಬೇಕಾದ ಫಲಾನುಭವಿಗಳ ಪರವಾಗಿ ತಿದ್ದಿರುವುದು, ಮೋಸ ಮಾಡಿರುವುದು ಎಲ್ಲವೂ ಕಂಡುಬಂತು!

ಕೂಡಲೇ ಅದೆಲ್ಲವನ್ನೂ ಮತ್ತೆ ತಮ್ಮ ಮತ್ತು ತಮ್ಮ ಆಪ್ತ ಸಹಾಯಕರ ಗಮನಕ್ಕೆ ತಂದೆ. ನಿಮ್ಮಿಂದ ಯಾವುದೇ ಪ್ರತಿಕ್ರಿಯೆಯೂ ಬರಲಿಲ್ಲ. Karnataka Innovation and Technology Society ಗೇ ಹೋಗಿ ಇದನ್ನು ತಿದ್ದಿರುವವರು ಯಾರು ಎಂದು ದಾಖಲೆ ತೋರಿಸಿ ಕೇಳಿದೆ. ಅದರ ಫಂಡಿಂಗ್ ಮ್ಯಾನೇಜರ್ ಸುಚಿತ್ ಎನ್ನುವವರು ತಾವೇ ತಿದ್ದಿರುವುದಾಗಿಯೂ ಒಪ್ಪಿಕೊಂಡರು. "ಈ ವಿಷಯವಾಗಿ ಮತ್ತೊಮ್ಮೆ ನೀವು ಸಚಿವರ ಬಳಿ ಹೋದರೂ ಏನೂ ಪ್ರಯೋಜನವಿಲ್ಲ, ಅವರೊಂದಿಗೆ ಚರ್ಚಿಸಿಯೇ ನಾವು ಇದೆಲ್ಲವನ್ನೂ ಮಾಡಿರುವುದು" ಎಂದು ಸ್ವತಃ ಅಲ್ಲಿನ ಜನರಲ್ ಮ್ಯಾನೇಜರ್ ಅವರೇ ನೇರವಾಗಿ ನನಗೆ ಹೇಳಿದರು!

ನನ್ನ ಹೆಸರಲ್ಲಿ ನಿಮಗೆ ಕನಿಷ್ಠ 10 -20 ಲಕ್ಷ ಸಂದಾಯವಾಗಿದೆ ಎನ್ನುವುದು ಆಗ ನನಗೆ ಸ್ಪಷ್ಟವಾಗಿ ಅರ್ಥವಾಗಿತ್ತು.ಅಷ್ಟೆಲ್ಲಾ ದೂರು ನೀಡಿದಾಗಿಯೂ, ದಾಖಲೆ ಸಮೇತ ಮನವಿ ಸಲ್ಲಿಸಿದ್ದಾಗ್ಯೂ ನೀವೇಕೆ ಭ್ರಷ್ಟರ ಪರವೇ ನಿಂತಿರಿ ಎನ್ನುವುದೂ ತಿಳಿದುಹೋಯಿತು.

ಈಗ ಹೇಳಿ ಡಾಕ್ಟರೇ... 

ಹತ್ಯೆಯಾಗಿರುವ ಬಿಜೆಪಿ ಕಾರ್ಯಕರ್ತನ ಕುಟುಂಬಕ್ಕೆ ನೀವು ನೀಡುತ್ತಿರುವ 10 ಲಕ್ಷ ರೂಪಾಯಿಗಳು ನನ್ನಿಂದಲೇ ನೀವು ಪಡೆದಿದ್ದು ತಾನೇ? ಅದು ನನ್ನ ಹಣವೇ ತಾನೇ? ಮತ್ಯಾಕೆ ವೈಯುಕ್ತಿಕವಾಗಿ 10 ಲಕ್ಷ ಕೊಡುತ್ತಿದ್ದೇನೆ ಎಂದು ಘೋಷಿಸಿದಿರಿ?

ಬಹುತೇಕ ಯಾರಿಗೂ ಹೆಸರೇ ಗೊತ್ತಿಲ್ಲದಿರುವ, ಬಹುಶಃ ಇಲಾಖೆಯ ಜವಾಬ್ಧಾರಿ ವಹಿಸಿಕೊಳ್ಳುವ ಮೊದಲು ಹಾಗೊಂದಿದೆ ಎನ್ನುವುದು ತಮಗೂ ತಿಳಿಯದೇ ಇದ್ದ  KITS ಎನ್ನುವ ಒಂದು ಸಣ್ಣ ಸಂಸ್ಥೆಯಲ್ಲೇ ಇಷ್ಟೊಂದು ಮಾಮೂಲಿ ಸಂಗ್ರಹವಾಗಬಹುದಾದರೆ, ಇನ್ನು ಉನ್ನತ ಶಿಕ್ಷಣ,ವೈದ್ಯಕೀಯ ಶಿಕ್ಷಣ, ಮತ್ತದರ ನೇಮಕಾತಿಗಳ/ವರ್ಗಾವಣೆಗಳ ಮೂಲಕ ಇನ್ನೆಷ್ಟು ಹುಟ್ಟಬಹುದು?

ವಿ.ಸೂ: 
* ನಾನು ಬರೆದ ವಿಷಯಗಳು ಸುಳ್ಳು ಎಂದು ವಾದಿಸುವವರು ಆಯ್ಕೆಪ್ರಕ್ರಿಯೆಯ ದಾಖಲೆಗಳನ್ನು ನನ್ನೆದುರು ಹಾಜರುಪಡಿಸತಕ್ಕದ್ದು. 
** ಈ ಬರಹದ ವಿರುದ್ಧ ದೂರು ದಾಖಲಿಸುವವರಿಗೆ ಸ್ವಾಗತ.  


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News